ADVERTISEMENT

ಶ್ರೀಕೃಷ್ಣ ಗಾರುಡಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಸ್ವರ್ಗದಲ್ಲಿ ಧರ್ಮರಾಯ, ಮುಖ ಗಂಟಿಕ್ಕಿಕೊಂಡು ಅತ್ತಿಂದಿತ್ತ   ಶತಪಥ ತಿರುಗುತ್ತಿದ್ದ. ಅಣ್ಣನ ಮ್ಲಾನವದನ, ಕಂಡೂ ಕಾಣದಂತಿರುವ ಸಿಟ್ಟು, ನಿರಾಶೆ ಕಂಡು ಉಳಿದ ಪಾಂಡವರು ಪರಸ್ಪರ ಮುಖ ನೋಡಿಕೊಂಡು, `ನೀ ಕೇಳು, ನೀ ಕೇಳು' ಎಂದು ಪಿಸು ಮಾತಿನಲ್ಲಿಯೇ ಚರ್ಚಿಸುತ್ತಿದ್ದಾಗಲೇ ಭೀಮನೇ ಮುಂದಾಗಿ, `ಅಣ್ಣಾ, ಏನು ವಿಷಯ. ಯಾಕೆ ಚಿಂತಾಕ್ರಾಂತನಾಗಿದ್ದೀಯ. ಏನು ವಿಷಯ. ಯಾರು ಏನೆಂದರು ಹೇಳು, ಅವರ ಊರು ಭಂಗ ಮಾಡುವೆ' ಎಂದು ಗುಡುಗಿದ.

`ಏನೂ ಇಲ್ಲಪ್ಪ. ನೀನು ಯಾರ ತೊಡೆ ಒಡೆಯುವ ಜರೂರತ್ತೂ ಇಲ್ಲ. ಈ ಕಲಿಯುಗದ ರಾಮನ ಕಡೆಯವರು ತಾವೇ ಪಂಚ ಪಾಂಡವರು. ತಮಗೆ ಕೃಷ್ಣನ ಸಾರಥ್ಯವೂ ಬೇಡ. ಪಕ್ಷದ ಕಾರ್ಯಕರ್ತರೇ ನಮಗೆ ಸಾರಥಿಯಾಗಿ ಚುನಾವಣೆಯಲ್ಲಿ ಮುನ್ನಡೆಸಲಿದ್ದಾರೆ ಎಂದು ಬಡಾಯಿ ಕೊಚ್ಚಿಕೊಂಡಿದ್ದು ಕೇಳಿ ಮನಸ್ಸಿಗೆ ಬೇಜಾರಾಗಿದೆ' ಎಂದು ಅಲವತ್ತುಕೊಂಡ ಧರ್ಮರಾಯ.

`ತೃಣ ಸಮಾನ ರಾಜಕಾರಣಿಗಳ ಮಾತನ್ನು ಅಷ್ಟ್ಯಾಕ್ ತಲಿಗಿ ಹಚ್ಚಿಕೊಂಡಿ. ತಾವೇ ಪಾಂಡವರು ಅಥವಾ ಕೌರವರು  ಎಂದು ಹೇಳಿಕೊಳ್ಳಲಿ ಬಿಡು. ಅದರಲ್ಲೇನು ಹೆಚ್ಚುಗಾರಿಕೆ ಅದ. ಅದರಿಂದ್ ನಮ್ಮ ಘನತೆಗೆ ಎಳ್ಳುಕಾಳಿನಷ್ಟು ಕುಂದು ಬರೂದಿಲ್ಲ ಬಿಡು' ಎಂದು ಸಮಾಧಾನದ ಮಾತನಾಡಿದ.

`ವಿಷಯ ಅದಲ್ಲಪ, ನಮಗ್ ಕೃಷ್ಣನ ಸಹವಾಸಾನು ಬೇಡ. ಅವನಿಲ್ಲದ ನಾವು ಚುನಾವಣಾ ಸಮರ ಗೆಲ್ತೀವಿ ಎಂದು ಈ ಬಿಜೆಪಿಯ ಭಂಡ ಜನ ನಾಯಕರು ರಣಕಹಳೆ ಮೊಳಗಿಸಿದ್ದಾರ. ಇದರಿಂದ ನಮಗ ಕೆಟ್ಟ ಹೆಸರು ಬರೂದಲ್ದ, ಕೃಷ್ಣನಿಗೂ ಕಳಂಕ ಹಚ್ಚಿದಂಗ ಆಗ್ರೈತಿ.  ಅದು ನನ್ನ ಚಿಂತೀಗಿ ಕಾರಣ' ಎಂದು ಧರ್ಮರಾಯ ತನ್ನ ಧರ್ಮಸಂಕಟ ಬಿಡಿಸಿಟ್ಟ.

ಕೃಷ್ಣನ ಹತ್ತಿರ ಹೋದ್ರ ಇದಕ್ಕೊಂದು ಪರಿಹಾರ ಸಿಗಬಹುದಲ್ಲ ಎಂದು ಅರ್ಜುನ  ತನ್ನ ಬತ್ತಳಿಕೆಯಿಂದ ಸಲಹೆಯೊಂದನ್ನು ತೇಲಿ ಬಿಟ್ಟ.
`ಕೃಷ್ಣನೂ ಈಗ ಊರಾಗ ಇಲ್ಲಪ. ಕಾಂಗ್ರೆಸ್ ಹೈಕಮಾಂಡ್‌ನ ಬುಲಾವ್ ಮ್ಯಾಲ ದಿಲ್ಲಿಗೆ ಹೋಗ್ಯಾನ' ಎಂದು ಧರ್ಮರಾಯ ನಿಟ್ಟುಸಿರುಬಿಟ್ಟ.

ಈಗೇನ್ ಮಾಡುದು. ನಾವೂ ಅಲ್ಲಿಗೇ ಹೋಗೋಣ ಎಂದು ನಕುಲ - ಸಹದೇವ ಸಲಹೆ ನೀಡುತ್ತಿದ್ದಂತೆ, `ನೀವು ಅಲ್ಲಿಗೆ ಬರೂದು ಬ್ಯಾಡಂತ, ನಾನೇ ಇಲ್ಲಿಗೆ ಬಂದೀನಿ' ಎಂದು ಹೇಳುತ್ತಲೇ ಕೃಷ್ಣ  ಪ್ರತ್ಯಕ್ಷನಾದ.  ಪಾಂಡವರು ಹರ್ಷದಿಂದ ಅವನನ್ನು ಪೈಪೋಟಿಯಿಂದ             ಅಪ್ಪಿಕೊಳ್ಳಲು ಮುಂದಾದರು.

`ಅವಸರಿಸಬೇಡಿ. ತಡೀರಿ ಸ್ವಲ್ಪು ಸುಧಾರಿಸಿಕೊಳ್ಳುವೆ' ಎಂದು ಕಿರೀಟವನ್ನು ಮತ್ತೊಮ್ಮೆ ಸರಿ(ಬಿಗಿ)ಪಡಿಸಿಕೊಂಡು ಕಿರೀಟ ಜಾರಿ ಬೀಳದಂತೆ ನೋಡಿಕೊಳ್ಳುತ್ತಲೇ ಪಾಂಡವರನ್ನು ಮೆತ್ತಗೆ ಆಲಂಗಿಸಿಕೊಂಡ ಕೃಷ್ಣ.

`ಕೃಷ್ಣಾ ಏನಿದು ನಿನ್ನ ಮಹಾತ್ಮೆ. ಹಿಂದೊಮ್ಮೆ ಪಾಂಚಜನ್ಯ ಮೊಳಗಿಸಿದ ನಿನಗೇ ಈಗ ಕಾಂಗ್ರೆಸ್‌ನವರು ಕೈಕೊಟ್ಟರಲ್ಲ. ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡ್ತೀವಿ ಎಂದು ಹೇಳಿದವರೂ ಏನೂ ಮಾಡಲಿಲ್ವಲ್ಲ' ಎಂದು ಪಾಂಡವರು ಒಕ್ಕೊರಲಿನಿಂದ ಆಕ್ಷೇಪಿಸಿದರು.

ಪಾಂಡವರ ಭರ್ತ್ಸನೆಯ ಕೂರಂಬುಗಳಿಗೆ ನಗು ಮುಖದಿಂದಲೇ ಉತ್ತರಿಸಿದ  ಕೃಷ್ಣ, `ಕೊನೆಗೂ ನನ್ನನ್ನು ಕರೆಯಿಸಿ ಸಲಹೆ ಕೇಳಿದ್ರಲ್ಲ. ನಾನು ಒಕ್ಕಲಿಗರ ಪಕ್ಷಪಾತಿ ಅಲ್ಲ ಎಂದು ತೋರಿಸಿಕೊಳ್ಳಲಿಕ್ಕೆ 80 ಜನರ ಪಟ್ಟಿ ಮುಂದಿಟ್ಟೆ. ಆಮೇಲೆ ಅದನ್ನು 54ಕ್ಕೆ ಇಳಿಸಿದೆ. ರಾಜಕೀಯದಾಗ ಇಂತಹ ನಾಟಕ ಆಡಬೇಕಪ್ಪ' ಎಂದ.

`ಕಾಂಗ್ರೆಸ್‌ನವರ ನಾಟಕ ಆಚೆಗಿರಲಿ. ಈ ಕಲಿಯುಗದ ಬಿಜೆಪಿಯವರು ಈಗ ರಾಮನಾಪ ಜಪಿಸುವುದನ್ನು ಬಿಟ್ಟು  ಪಾಂಡವರ ಬೆನ್ನು ಬಿದ್ದಿದ್ದಾರಲ್ಲ. ಜತೆಗೆ ನಿನ್ನ ಸಹವಾಸವೂ ಬೇಡ ಎಂದಿದ್ದಾರಲ್ಲ. ಅದಕ್ಕೇನು ಪರಿಹಾರ ಐತಿ ಹೇಳು' ಎಂದು ಭೀಮ, ಮೀಸೆ ತಿರುವುತ್ತಲೇ ಪಟ್ಟು ಹಿಡಿದು  ಪ್ರಶ್ನಿಸಿದ.

`ಉತ್ತರ ಸರಳ ಐತ್ರೆಪಾ. ನಾನು ಪಾಂಡವರ ಕೈಬಿಟ್ಟು ಈ ಬಾರಿ ಕೌರವರ ಸಾರಥಿಯಾಗಿ ವಿಜಯ ರಥ ಓಡುಸ್ತೀನಿ ಅಷ್ಟೆ' ಎಂದ ಕೃಷ್ಣ
`ಯದಾ ಯದಾಯಿ ಧರ್ಮಸ್ಯ
ಗ್ಲಾನಿರ್ ಭವತಿ ಭಾರತ (ಕರ್ನಾಟಕ )
ಅಭ್ಯುತ್ಥಾನಂ ಅಧರ್ಮಸ್ಯ
ತದಾತ್ಮಾನಂ ಸುಜಾಮ್ಯಹಂ...
...ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ..'

ಕರ್ನಾಟಕದಾಗ ರಾಜಧರ್ಮಕ್ಕೆ ಸಂಚಕಾರ ಬಂದೈತಿ. ಅದನ್ನು ಉಳಸಾಕ ನಾನು ಈಗ  ಕೌರವರ (ಕಾಂಗ್ರೆಸ್) ಪರ  ನಿಲ್ಲಬೇಕಾಗಿ ಬಂದೈತಿ. ಎಲ್ಲವೂ ಕಲಿಗಾಲದ ಮಹಿಮೆ' ಎಂದು ಕೃಷ್ಣ, ಕಿರೀಟ ಸರಿಪಡಿಸಿಕೊಂಡು ಪಾಂಚಜನ್ಯ ಮೊಳಗಿಸುತ್ತ ರಥವೇರಿ ಹೊರಡುತ್ತಿದ್ದಂತೆ ಪಾಂಡವರು ಮಾತೇ ಮರೆತವರಂತೆ ಬೆಪ್ಪಾಗಿ ನೋಡುತ್ತ ನಿಂತರು. ಕೆಟ್ಟ ಕನಸಿನಿಂದ ಎಚ್ಚೆತ್ತ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿಯ ಸುಡು ಬಿಸಿಲಲ್ಲೂ ಮೈಯೆಲ್ಲ ನಡುಗುತ್ತಿರುವುದನ್ನೂ ಮರೆತು ತಮ್ಮ ದುಃಸ್ವಪ್ನದ ಅನುಭವ ಹಂಚಿಕೊಳ್ಳಲು ಶೆಟ್ಟರ್ ಸಾಹೇಬ್ರಿಗೆ ಫೋನ್ ಮಾಡಿದರು...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.