ಬೆಂಗಳೂರು: `ಜನಸೇವೆ ಮಾಡಬೇಕು, ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂಬ ಹಂಬಲದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದೇನೆ~ ಎಂದು ನಟಿ ರಕ್ಷಿತಾ ಹೇಳಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಅವರ `ಬಿಎಸ್‌ಆರ್~ ಪಕ್ಷಕ್ಕೆ ಶುಕ್ರವಾರ ಇಲ್ಲಿ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಹಿಂದೆ ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿತ್ತು. ಆಗ ನನಗೆ ಆಸಕ್ತಿ ಇರಲಿಲ್ಲ. ಶ್ರೀರಾಮುಲು ಬಡಜನರ ಬಗ್ಗೆ ತೋರುವ ಕಾಳಜಿ, ಪ್ರೀತಿ ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆಯಾಗಲು ಪ್ರೇರಣೆಯಾಯಿತು~ ಎಂದರು.
`ಈಚೆಗೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಜನರ ಒಲವು ಹೆಚ್ಚಾಗುತ್ತಿದ್ದು, ಬಿಎಸ್‌ಆರ್ ಪಕ್ಷ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಸಲಿದೆ. ಸದ್ಯಕ್ಕೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ. ರಾಜಕೀಯದಲ್ಲಿ ಮೊದಲ ಹೆಜ್ಜೆ ಪಕ್ಷ ಸಂಘಟನೆ. ಸದ್ಯಕ್ಕೆ ಸಂಘಟನೆಯಲ್ಲಿ ತೊಡಗುತ್ತೇನೆ. ಮುಂದೆ ನೋಡೋಣ~ ಎಂದರು. ಇದೇ ತಿಂಗಳ 13ರಂದು ಶ್ರೀರಾಮುಲು ಅವರು ಗದಗದಲ್ಲಿ ನಡೆಸುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ನಟ, ನಿರ್ದೇಶಕ ಪ್ರೇಮ್ ಮಾತನಾಡಿ, `ನಾನು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಆಸಕ್ತಿ ಇಲ್ಲ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.