ADVERTISEMENT

ಸಂಪುಟಕ್ಕೆ ಇಬ್ಬರ ಸೇರ್ಪಡೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು 32 ನಿಗಮ- ಮಂಡಳಿಗಳಿಗೆ ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಬಿಜೆಪಿ ಪ್ರಮುಖರ (ಕೋರ್ ಕಮಿಟಿ) ಸಭೆಯಲ್ಲಿ ಶನಿವಾರ ಗಂಭೀರ ಚರ್ಚೆ ನಡೆದಿದೆ. ವಾರದಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗುವ ಸಾಧ್ಯತೆ ಇದೆ.

ಬಿ.ಜೆ.ಪುಟ್ಟಸ್ವಾಮಿ ಮತ್ತು ಸುನೀಲ್ ವಲ್ಯಾಪುರೆ ಅವರ ರಾಜೀನಾಮೆಯಿಂದ ತೆರವಾದ ಎರಡು ಸಚಿವ ಸ್ಥಾನಗಳನ್ನು ತುಂಬಲು ನಿರ್ಧರಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುವ ರೀತಿಯಲ್ಲಿ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆದಿದ್ದು, ಯಾರು ಎಂಬುದರ ಕುರಿತು ಅಂತಿಮ ತೀರ್ಮಾನ ಆಗಿಲ್ಲ.

ಮಧ್ಯಾಹ್ನ 3ರಿಂದ ತಡ ರಾತ್ರಿವರೆಗೆ ನಗರದ ರಹಸ್ಯ ಸ್ಥಳದಲ್ಲಿ ಪಕ್ಷದ ಪ್ರಮುಖರು ಸಭೆ ನಡೆಸಿದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಉಪ ಮುಖ್ಯಮಂತ್ರಿ ಆರ್.ಅಶೋಕ, ಸಂಸದರಾದ ನಳಿನಕುಮಾರ್ ಕಟೀಲು, ಪ್ರಹ್ಲಾದ ಜೋಶಿ, ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸತೀಶ್ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ತಮ್ಮ ಅಧಿಕೃತ ಕಾರು ಮತ್ತು ಸಿಬ್ಬಂದಿಯನ್ನು ಬಿಟ್ಟು ಖಾಸಗಿ ವಾಹನಗಳಲ್ಲಿ ತೆರಳಿದ ಈ ಮುಖಂಡರು ಮುಂಬರುವ ವಿಧಾನಸಭೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.

ಯಡಿಯೂರಪ್ಪ ಜತೆ ಗುರುತಿಸಿಕೊಂಡವರನ್ನು ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಬದಲು, ಅವರಿರುವ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಹೊಸಬರ ನೇಮಕದಿಂದ ಹಳೇ ನೇಮಕಾತಿ ತನ್ನಿಂದತಾನೆ ರದ್ದಾಗಲಿದೆ. 32 ನಿಗಮಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಪಕ್ಷದ ವತಿಯಿಂದ ಸಿದ್ಧಪಡಿಸಿದ್ದು, ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅದಕ್ಕೆ ಅಂತಿಮ ಮುದ್ರೆ ಒತ್ತಲಾಗಿದೆ. ನೇಮಕ ಆದೇಶ ಶೀಘ್ರ ಹೊರಬೀಳಲಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.