ADVERTISEMENT

ಸಂಭ್ರಮದ ವೈರಮುಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST
ಸಂಭ್ರಮದ ವೈರಮುಡಿ ಮಹೋತ್ಸವ
ಸಂಭ್ರಮದ ವೈರಮುಡಿ ಮಹೋತ್ಸವ   

ಮಂಡ್ಯ: ಜಿಲ್ಲೆಯ ಧಾರ್ಮಿಕ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ಭಾನುವಾರ ರಾತ್ರಿ ಅಸಂಖ್ಯಾ ಭಕ್ತರ ಜಯಘೋಷ, ಸಂಭ್ರಮದ ನಡುವೆ ಪ್ರಸಿದ್ಧ ಚಲುವನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟಧಾರಣೆ ಮಹೋತ್ಸವ ವೈಭವದಿಂದ ಜರುಗಿತು.

ಜಿಲ್ಲೆಯಷ್ಟೇ ಅಲ್ಲದೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ `ಗೋವಿಂದಾ... ಗೋವಿಂದಾ..~ ಉದ್ಘೋಷದೊಂದಿಗೆ ವಾರ್ಷಿಕ ವೈರಮುಡಿ ಉತ್ಸವಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಜಿಲ್ಲಾ ಖಜಾನೆಯಿಂದ ತರಲಾದ ವಜ್ರ ಖಚಿತ ಕಿರೀಟ, ಆಭರಣಗಳನ್ನು ಸಂಜೆ 6.30ರ ವೇಳೆಗೆ ಮೇಲುಕೋಟೆ ದೇಗುಲಕ್ಕೆ ತರಲಾಯಿತು.

ವೈರಮುಡಿ ವಜ್ರಖಚಿತ ಕಿರೀಟದೊಂದಿಗೆ ಅಲಂಕೃತ ಚಲುವನಾರಾಯಣಸ್ವಾಮಿಯನ್ನು ದೇಗುಲದಿಂದ ಹೊರಗೆ ತರುವುದೊಂದಿಗೆ ಉತ್ಸವ ರಾತ್ರಿ 8.50 ಗಂಟೆಗೆ ಆರಂಭವಾಯಿತು. ದೇಗುಲದ ಸುತ್ತಲೂ ರಸ್ತೆಗಳ ಇಕ್ಕೆಲದಲ್ಲಿಯೂ ಉತ್ಸವದ ನಿರೀಕ್ಷೆಯಲ್ಲಿ ಇದ್ದ ಭಕ್ತಾದಿಗಳು ಅಲಂಕೃತ ದೇವರನ್ನು ಕಂಡು ಪುಳಕಿತರಾದರು.

ಉತ್ಸವ ದೇಗುಲದ ಹೊರಗೆ ಬಂದಾಗ ದೇವರಮೂರ್ತಿಯತ್ತ ಭಕ್ತ ಸಮೂಹ ಹೂವು, ಜವನವನ್ನು ತೂರಿ ಭಕ್ತಿಯನ್ನು ಸಮರ್ಪಿಸಿದರು. ಉತ್ಸವ ಮೂರ್ತಿಗೆ ಹೆಗಲು ಒಡ್ಡಿದ ಭಕ್ತರು ಅದನ್ನು ತೂಗಲು ನೆರವಾದರು. ಇದಕ್ಕೂ ಮುನ್ನ ಉಸ್ತುವಾರಿ ಸಚಿವ ಆರ್.ಅಶೋಕ್ ಹೆಗಲು ಕೊಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ನಿರೀಕ್ಷೆಗೂ ಮೀರಿದ ಭಕ್ತರು ಸೇರಿದ್ದು, ಭಕ್ತಿಯಿಂದ ಪರವಶರಾಗಿದ್ದ ಭಕ್ತ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಶಾಸಕರಾದ ಅಶ್ವತ್ಥ ನಾರಾಯಣ, ಸಿ.ಎಸ್.ಪುಟ್ಟರಾಜು, ನ್ಯಾಯಾಧೀಶರಾದ ಶಾರದಾ, ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಉಪ ವಿಭಾಗಾಧಿಕಾರಿ ಶಾಂತಾ ಹುಲಮನಿ ಮತ್ತು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.