ADVERTISEMENT

ಸಂಶೋಧನೆಯ ಸತ್ಯದಿಂದಾಗಿಯೇ ಕಲಬುರ್ಗಿ ಹತ್ಯೆ

ಕನ್ನಡ ವಿ.ವಿ ನುಡಿಹಬ್ಬದಲ್ಲಿ ಪುರುಷೋತ್ತಮ ಬಿಳಿಮಲೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2016, 19:30 IST
Last Updated 10 ಮಾರ್ಚ್ 2016, 19:30 IST
ಗುರುವಾರ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 24ನೇ ನುಡಿಹಬ್ಬ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ರಾಜ್ಯಪಾಲ ವಜುಭಾಯಿ ವಾಲಾ, ಸಚಿವ ಟಿ.ಬಿ. ಜಯಚಂದ್ರ ಹಾಗೂ ಜೆಎನ್‌ಯು ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು
ಗುರುವಾರ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 24ನೇ ನುಡಿಹಬ್ಬ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ರಾಜ್ಯಪಾಲ ವಜುಭಾಯಿ ವಾಲಾ, ಸಚಿವ ಟಿ.ಬಿ. ಜಯಚಂದ್ರ ಹಾಗೂ ಜೆಎನ್‌ಯು ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು   

ಹೊಸಪೇಟೆ: ‘ಸಂಶೋಧಕ ಎಂ.ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನೆಯ ಸತ್ಯಗಳಿಂದಾಗಿಯೇ ಅಮಾನುಷವಾಗಿ ಕೊಲೆಯಾದರು’ ಎಂದು ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಹೇಳಿದರು.

ಗುರುವಾರ ಇಲ್ಲಿ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 24ನೇ ‘ನುಡಿಹಬ್ಬ’ದಲ್ಲಿ (ಘಟಿಕೋತ್ಸವ) ಪ್ರದಾನ ಭಾಷಣ ಮಾಡಿದರು.

‘ಸಂಶೋಧಕ ಆಗಾಗ ಶಿಲುಬೆಗೆ ಏರಬೇಕಾಗುತ್ತದೆ ಎಂಬ ಅವರ ಮಾತು ಅವರಲ್ಲಿಯೇ ನಿಜವಾಯಿತು. ಸರ್ಕಾರಕ್ಕೆ ಇದುವರೆಗೆ ಕೊಲೆಗಾರರನ್ನು ಬಂಧಿಸಲು ಆಗಿಲ್ಲ. ಸಂಶೋಧಕರು ಇಂದು ತಮ್ಮ ಓದು ಹಾಗೂ ಕ್ಷೇತ್ರ ಕಾರ್ಯದಲ್ಲಿ ಕಂಡುಕೊಂಡ, ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಸಂಶೋಧನೆ ಮುಂದುವರೆಸುವುದು ಕಷ್ಟವಾಗುತ್ತಿದೆ. ಸಮಕಾಲೀನ ಸಮಾಜ ಏನನ್ನೂ ನಿರೀಕ್ಷಿಸುತ್ತಿದೆಯೋ ಅದನ್ನೇ ಹೇಳಬೇಕಾಗಿರುವ ಒತ್ತಡದಲ್ಲಿ ನಾವು ಸಿಲುಕಿದ್ದೇವೆ’ ಎಂದು ವಿಷಾದಿಸಿದರು.

‘ಟಿಪ್ಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಅಫೀಮು ಇರಲಿಲ್ಲ, ಟಿಪ್ಪುವಿನ ಕಾಲದೊಳು ಜೂಜಿನಾಟ ಮೇಣ್‌ ವ್ಯಭಿಚಾರದ ಸುಳಿವಿರಲಿಲ್ಲ’ ಎಂಬ ಸಾಲುಗಳನ್ನು ಹೇಳಿದ್ದಕ್ಕೆ ನಾನು ಕೆಟ್ಟ ಮತ್ತು ಅಶ್ಲೀಲ ಮಾತುಗಳನ್ನು ಕೇಳಬೇಕಾಯಿತು. ಪಂಡರಾಪುರದ ವಿಠ್ಠಲನು ವಲಸೆಗಾರ ಪಶುಪಾಲಕರ ದೈವವಾಗಿರುವ ಸಾಧ್ಯತೆ ಇದೆ ಎಂದಿದ್ದಕ್ಕೆ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು’ ಎಂದು ಹೇಳಿದರು.

‘ಇಂದು ಎರಡೆರಡು ಬಾರಿ ಯೋಚಿಸಿ ಬರೆಯಬೇಕಾದ, ಮಾತಾಡಬೇಕಾದ ವಾತಾವರಣ ನಿರ್ಮಾಣ ಆಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮೂವರಿಗೆ ಡಿ.ಲಿಟ್‌: ಮೂವರಿಗೆ ಡಿ.ಲಿಟ್‌, 57 ಜನರಿಗೆ ಪಿಎಚ್‌.ಡಿ ಹಾಗೂ 74 ಮಂದಿಗೆ ಎಂ.ಫಿಲ್‌ ಪದವಿ ಪ್ರದಾನ ಮಾಡಲಾಯಿತು.

ಈ ಬಾರಿ ಯಾರಿಗೂ ‘ನಾಡೋಜ’ ಇಲ್ಲ: ಕನ್ನಡ ವಿಶ್ವವಿದ್ಯಾಲಯದ 24 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾರಿಗೂ ‘ನಾಡೋಜ’ ಗೌರವ ಪ್ರದಾನ ಮಾಡಲಿಲ್ಲ. ಗುರುವಾರ ಬೆಳಿಗ್ಗೆ ವೇಳೆಗೆ ರಾಜ್ಯಪಾಲರ ಕಚೇರಿಯಿಂದ ಮಾಹಿತಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಕಡೆಯಿಂದ ಯಾವುದೇ ಮಾಹಿತಿ ಬರಲಿಲ್ಲ.
*
ಭಾಷಣ ಮೊಟಕು: ಅಸಮಾಧಾನ
ಹೊಸಪೇಟೆ:
ನುಡಿಹಬ್ಬದ ಭಾಷಣವನ್ನು ಐದು ನಿಮಿಷಕ್ಕೆ ಮೊಟಕುಗೊಳಿಸಿರುವುದಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ವೇದಿಕೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ದೆಹಲಿಯಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದ ನಂತರ ಕೇವಲ ಐದು ನಿಮಿಷ ಮಾತನಾಡಬೇಕು ಎಂದು ಹೇಳಿದ್ದಾರೆ. ಹೀಗೆ ಮಾಡುವುದಾದರೆ ಘಟಿಕೋತ್ಸವ ಭಾಷಣ ರದ್ದುಪಡಿಸುವುದು ಉತ್ತಮ. ಇಲ್ಲವಾದಲ್ಲಿ ಕಾಲಾವಕಾಶವನ್ನು ವಿಸ್ತರಿಸಿ’ ಎಂದು ಮಾತು ಮುಗಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಶ್ವವಿದ್ಯಾಲಯ ಕಟ್ಟಿದವರಲ್ಲಿ ನಾನೂ ಒಬ್ಬ. ಘಟಿಕೋತ್ಸವ ಭಾಷಣ ಬಹಳ ಜವಾಬ್ದಾರಿಯಿಂದ ಕೂಡಿರುತ್ತದೆ. ಹಾಗಾಗಿ ಭಾಷಣ ಸಿದ್ಧಪಡಿಸಲು ಎರಡು ತಿಂಗಳು ತೆಗೆದುಕೊಂಡಿದ್ದೆ. ಆದರೆ ಇಲ್ಲಿಗೆ ಬಂದ ಬಳಿಕ ಐದು ನಿಮಿಷ ಕೊಟ್ಟಿದ್ದಾರೆ. ಇದು ವಿದ್ವಾಂಸರಿಗೆ ಮಾಡುವ ಅಪಮಾನ’ ಎಂದರು.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನನಗೆ ಭಾಷಣ ಮಾಡಲು 40 ನಿಮಿಷ ಸಮಯ ಕೊಟ್ಟಿದ್ದರು. ಹೀಗಿರುವಾಗ ಐದು ನಿಮಿಷ ಕೊಡುವುದು ಎಷ್ಟು ಸರಿ. ಅಷ್ಟು ದೂರದಿಂದ ಬಂದು ಏನು ಪ್ರಯೋಜನವಾಯಿತು. ಈ ರೀತಿ ಮಾಡುವುದಾದರೆ ಘಟಿಕೋತ್ಸವ ಭಾಷಣ ಮೊಟಕುಗೊಳಿಸಬೇಕು. ವಿದ್ವಾಂಸರ ಬದಲಾಗಿ ಸ್ಥಳೀಯ ರಾಜಕಾರಣಿಗಳನ್ನು ಕರೆಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.