ADVERTISEMENT

ಸಂಸದ, ಶಾಸಕರ ವಿರುದ್ಧ ಅರಣ್ಯಾಧಿಕಾರಿ ದೂರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:30 IST
Last Updated 7 ಡಿಸೆಂಬರ್ 2018, 19:30 IST

ಶಿವಮೊಗ್ಗ:ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದ್ದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಪ್ರಾಣ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಸದ ರಾಘವೇಂದ್ರ, ಸಾಗರ ಶಾಸಕ ಎಚ್‌. ಹಾಲಪ್ಪ ಹರತಾಳು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಬಿ. ಸ್ವಾಮಿರಾವ್ ಸೇರಿ 30ಕ್ಕೂ ಹೆಚ್ಚು ಜನರ ವಿರುದ್ಧ ರಿಪ್ಪನ್‌ಪೇಟೆ ವಲಯ ಅರಣ್ಯಾಧಿಕಾರಿ ಜಿ. ಹನುಮಂತಯ್ಯ ರಿಪ್ಪನ್‌ಪೇಟೆ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಮೊಸರೂರು ಗ್ರಾಮದ ಸರ್ವೆ ನಂಬರ್ 90, 94ರ ಮೀಸಲು ಅರಣ್ಯ ಪ್ರದೇಶದಲ್ಲಿನ ಒತ್ತುವರಿ ತೆರವು ಮಾಡಲು ನ. 15ರಂದು ಕಾರ್ಯಾಚರಣೆಗೆ ತೆರಳಿದ್ದಾಗ 200ಕ್ಕೂ ಹೆಚ್ಚು ಜನರು ದಾರಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದರು. ಮಧ್ಯಪ್ರವೇಶಿಸಿದ ತಹಶೀಲ್ದಾರ್ ಅವರು ಜಂಟಿ ಸರ್ವೆಯ ನಂತರ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಅಂದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಧರಣಿಯೂ ಅಂತ್ಯವಾಗಿತ್ತು.

‘ಕಾರ್ಯಾಚರಣೆಗೆ ತೆರಳಿದ್ದ ವೇಳೆ ಯಾವುದೇ ಸಂಘರ್ಷ, ಸಾವು, ನೋವು ಸಂಭವಿಸಿರಲಿಲ್ಲ. ಅರಸಾಳು ಕಚೇರಿಗೆ ಹೋದ ನಂತರ ಶಾಸಕ ಹಾಲಪ್ಪ ನೇತೃತ್ವದಲ್ಲಿ ಟಿಲ್ಲರ್‌ನಲ್ಲಿ ರೈತರೊಬ್ಬರ ಮೃತದೇಹ ಇಟ್ಟುಕೊಂಡು ಅಲ್ಲಿಗೆ ಬಂದ ಹಲವುಜನಪ್ರತಿನಿಧಿಗಳು, ಸಾರ್ವಜನಿಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಸೂಕ್ತ ರಕ್ಷಣೆ ನೀಡಬೇಕು’ ಎಂದು ದೂರಿನಲ್ಲಿ ಹನುಮಂತಯ್ಯ ಮನವಿ ಮಾಡಿದ್ದಾರೆ.

ADVERTISEMENT

ಘಟನೆ ನಡೆದ ದಿನ ಮೊಸರೂರಿನ ರೈತ ಲಕ್ಷ್ಮಣಪ್ಪ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ನಂತರ ಅವರ ಮೃತದೇಹವನ್ನು ಅರಸಾಳು ಅರಣ್ಯಾಧಿಕಾರಿ ಕಚೇರಿಗೆ ತಂದು ಧರಣಿ ನಡೆಸಲಾಗಿತ್ತು. ಸಂಸದರು, ಶಾಸಕರ ಒತ್ತಡಕ್ಕೆ ಮಣಿದ ಪೊಲೀಸರು, ವಲಯ ಅರಣ್ಯಾಧಿಕಾರಿ ಹನುಮಂತಯ್ಯ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಅರಣ್ಯಾಧಿಕಾರಿಗಳುಅಧಿಕೃತ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.