ADVERTISEMENT

ಸತತ ಪ್ರಯತ್ನವಿದ್ದರೆ ಯಾವ ಪರೀಕ್ಷೆಯೂ ಕಠಿಣವಲ್ಲ

ಜಡೇಕುಂಟೆ ಮಂಜುನಾಥ್
Published 5 ಮೇ 2012, 19:30 IST
Last Updated 5 ಮೇ 2012, 19:30 IST

ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ರಾಜ್ಯದ ಪ್ರತಿಭೆ


ಚಳ್ಳಕೆರೆ:
ತಾಲ್ಲೂಕು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಗೆ ಹೆಸರಾಗಿತ್ತು. ಆದರೆ, ಶೈಕ್ಷಣಿಕವಾಗಿ ಇತ್ತೀಚೆಗೆ ಒಂದಿಷ್ಟು ಗಮನಾರ್ಹ ಸಾಧನೆಗಳು ಈ ಭಾಗದ ವಿದ್ಯಾವಂತ ಪದವೀಧರರಿಂದ ಕಂಡು ಬರುತ್ತಿವೆ.

ಸದಾ ಬರಗಾಲ ಪೀಡಿತ ಚಳ್ಳಕೆರೆ ತಾಲ್ಲೂಕಿನ ಯುವಕ ಕೆ. ಕೃಷ್ಣ ಯುಪಿಎಸ್‌ಸಿಯಲ್ಲಿ 310ನೇ ರ‌್ಯಾಂಕ್ ಪಡೆದಿದ್ದಾರೆ.

ಕೃಷ್ಣ ತಾಲ್ಲೂಕಿನ ತಳಕು ಹೋಬಳಿಯ ಬಂಜಿಗೆರೆ ಗ್ರಾಮದ ಎಂಜಿನಿಯರ್ ಪದವೀಧರ. ತಂದೆ ತಾಳಿಕೆರೆ ಈರಣ್ಣ ಕುಟುಂಬದ ಕೆಂಗಪ್ಪ ಕಂಪ್ಯೂಟರ್ ವಿಜ್ಞಾನದಲ್ಲಿ ಎಂಜಿನಿಯರ್ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಬಿಇಎಲ್ ಕಂಪನಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನೆಲಮಂಗಲದಲ್ಲಿ ಪಡೆದು ರಾಜಾಜಿ       ನಗರದ ಕೆಎಲ್‌ಇ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಕೆ.ಆರ್. ಸರ್ಕಲ್   ನಲ್ಲಿ ಇರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರಿಂಗ್    ಮುಗಿಸಿದ್ದಾರೆ.

ಬಂಜಿಗೆರೆಯ ಕೆಂಗಪ್ಪ ಎಂಬ ನಿವೃತ್ತ ತಹಶೀಲ್ದಾರ್ ಎಂಬುವರು ಸರ್ಕಾರಿ ಕೆಲಸ ನಿಮಿತ್ತ ಕೆಲ ವರ್ಷಗಳ ಹಿಂದೆ ನೆಲಮಂಗಲಕ್ಕೆ ಹೋಗಿ ನೆಲೆಸಿ ಅಲ್ಲಿಯೇ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಇರುವ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು. ಇರುವ ಇಬ್ಬ ಗಂಡು ಮಗನಾದ ಕೃಷ್ಣ ಇದೀಗ ಅತ್ಯುನ್ನತ ನಾಗರೀಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

6ಭಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡ ಇವರು ಮೂರು ಭಾರಿ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಇದೀಗ 6ನೇ ಭಾರಿ ಕನ್ನಡ ಸಾಹಿತ್ಯ ಮತ್ತು ಇತಿಹಾಸವನ್ನು ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು 310ನೇ ರ‌್ಯಾಂಕ್ ಗಳಿಸಿರುವ ಕೃಷ್ಣ ಅವರನ್ನು  `ಪ್ರಜಾವಾಣಿ~ ಮಾತನಾಡಿಸಿದಾಗ ತಮ್ಮ ಸಾಧನೆಯ ಸಂತಸ ಹಂಚಿಕೊಂಡರು.

- ನಿಮ್ಮ ಸಾಧನೆಗೆ ಪ್ರೇರಣೆ ಯಾರು?
ಸಹಜವಾಗಿಯೇ ತಂದೆ-ತಾಯಿಯರ ಆಸೆಯಂತೆ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಇತ್ತು. ಅದು ನಿರಂತರ ಪರಿಶ್ರಮದಿಂದ ಇದೀಗ ಈಡೇರಿದೆ.

-ಎಂಜಿನಿಯರ್ ಪದವೀಧರರಾದ ನಿಮಗೆ ಕನ್ನಡ ಸಾಹಿತ್ಯ ಕಷ್ಟ ಆಗಲಿಲ್ಲವೇ?
ಖಂಡಿತಾ ಸಮಸ್ಯೆ ಆಯ್ತು. ಆದರೆ,    ಕನ್ನಡದ ಹೆಸರಾಂತ ಸಾಹಿತಿ ಸಾ.ಶಿ. ಮರಳಯ್ಯ ಅವರ ಹತ್ತಿರ ತೆಗೆದುಕೊಂಡ ಮಾರ್ಗದರ್ಶನ ನನಗೆ ತುಂಬಾ ಸಹಕಾರಿ ಆಯಿತು.

ಯುಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್ ಪಡೆದಿದ್ದು ಎಲ್ಲಿ?
ಕಳೆದ ಪೂರ್ವಭಾವಿ ಪರೀಕ್ಷೆಗೆ ಮಾತ್ರ ಹೈದರಾಬಾದ್‌ನಲ್ಲಿ ಕೋಚಿಂಗ್       ಪಡೆದಿದ್ದೆ. ಆದರೆ, ಮುಖ್ಯ ಪರೀಕ್ಷೆಗೆ ನಾನು ಕಾರ್ಯನಿರ್ವಹಿಸುವ ಕಂಪೆನಿಯಲ್ಲಿ ರಜೆ ನೀಡದ ಕಾರಣ ಕೋಚಿಂಗ್ ಪಡೆಯಲಿಕ್ಕೆ ಸಾಧ್ಯವಾಗಲಿಲ್ಲ.

-ಈಗಿನ ನಿಮ್ಮ ರ‌್ಯಾಂಕಿಂಗ್ ತೃಪ್ತಿ ತಂದಿದೆಯೇ?
ನನ್ನ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಬಂದಿದೆ. ಇನ್ನೂ ಸಾಧನೆ ಮಾಡಬೇಕು ಎಂಬ ಆಸೆಯೂ ಇದೆ. ಅದ್ದರಿಂದಲೇ ಮುಂದಿನ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದೇನೆ.

-ಯುಪಿಎಸ್‌ಸಿ ಪರೀಕ್ಷೆಗೆ ತೆಗೆದುಕೊಂಡವರಿಗೆ ನಿಮ್ಮ ಸಲಹೆ ಏನು?
ಸಾಧಿಸುವ ಛಲ, ತಲುಪಬೇಕಾದ ಗುರಿ ಮನಸ್ಸಿನಲ್ಲಿದ್ದರೆ ಖಂಡಿತಾ ಯಶಸ್ವಿಯಾಗಬಹುದು. ನಿರಂತರ ಪ್ರಯತ್ನ, ಸತತ ಅಭ್ಯಾಸ ಮಾಡಿದರೆ ಯಾವ           ಪರೀಕ್ಷೆಯೂ ಕಠಿಣವಲ್ಲ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ             ದೃಢಸಂಕಲ್ಪ ಮಾಡಿದರೆ ಯಾವುದೂ ಅಸಾಧ್ಯವಲ್ಲ.

ಕೃಷ್ಣ ಅವರ ದೃಢ ನಿರ್ಧಾರ, ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದೆ. ಆ ಮೂಲಕ ಬಯಲುಸೀಮೆಗೆ ಉನ್ನತ ಹುದ್ದೆಯೊಂದು ಲಭಿಸಿದಂತಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT