ADVERTISEMENT

ಸದನದಲ್ಲಿ ಪವರ್ಫುಲ್, ಕಲರ್ಫುಲ್ ಬಣ್ಣನೆ...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ಮೋಟಮ್ಮ: ನೀವು (ಶೋಭಾ ಕರಂದ್ಲಾಜೆ) ‘ಪವರ್’ಫುಲ್ ಮಿನಿಷ್ಟ್ರು... ರಾಜ್ಯದ ವಿದ್ಯುತ್ ಕೊರತೆಯನ್ನು ಬಗೆಹರಿಸಿ... ದಿನದ ಇಪ್ಪತ್ನಾಲ್ಕೂ ಗಂಟೆ ವಿದ್ಯುತ್ ನೀಡುವ ಭರವಸೆಯನ್ನು ಈಡೇರಿಸಿ...

ಶೋಭಾ: ನಾನು ಪವರ್ (ಇಂಧನ) ಮಿನಿಷ್ಟ್ರು ಅಷ್ಟೇ.

ಭಾರತಿ ಶೆಟ್ಟಿ (ಶೋಭಾ ಬೆಂಬಲಕ್ಕೆ ನಿಂತು): ಅವರು ಪವರ್‌ಫುಲ್ ಆದರೆ, ನೀವು ಕಲರ್‌ಫುಲ್!

ರಾಜ್ಯದಲ್ಲಿರುವ ವಿದ್ಯುತ್ ಕ್ಷಾಮದ ಬಗ್ಗೆ ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಮಹಿಳಾ ಸದಸ್ಯರ ನಡುವೆ ಹೀಗೊಂದು ಸ್ವಾರಸ್ಯಕರ ವಾಗ್ವಾದ ನಡೆಯಿತು.

ಬಿಜೆಪಿಯ ಗಣೇಶ್ ಕಾರ್ಣಿಕ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ ಅವರು, ‘ಪ್ರಸಕ್ತ ಸಾಲಿನಲ್ಲಿ ಜನವರಿವರೆಗೆ ಒಟ್ಟು 37,760 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಸಲಾಗಿದೆ’ ಎಂದು ಹೇಳಿದರು.

ಲೈನ್‌ಮನ್‌ಗಳ ನೇಮಕಾತಿ: ‘ಗ್ರಾಮೀಣ ಭಾಗದಲ್ಲಿ ಲೈನ್‌ಮನ್‌ಗಳ ಕೊರತೆ ಬಹಳಷ್ಟಿದೆ. ಇದನ್ನು ನೀಗಿಸಲು ಸುಮಾರು 2000 ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಸದ್ಯದಲ್ಲಿಯೇ ಲೈನ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

ಆದಾಯ ಮಿತಿ ಹೆಚ್ಚಳ ಇಲ್ಲ
‘ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಓಬಿಸಿ ಕೋಟಾದಡಿ ಪ್ರವೇಶ ಪಡೆಯಲು  ನಿಗದಿಪಡಿಸಲಾಗಿರುವ ಆದಾಯದ ಮಿತಿಯನ್ನು (ರೂ 2 ಲಕ್ಷ) ವಿಸ್ತರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಪಕ್ಷೇತರ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ‘ಮಿತಿಯನ್ನು ವಿಸ್ತರಿಸಿದರೆ ಈ ವರ್ಗದಲ್ಲಿರುವ ಅತ್ಯಂತ ಕಡುಬಡವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಈ ಮಿತಿಯನ್ನು ಹೆಚ್ಚಿಸಲಾಗದು’ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ಮಿತಿಯನ್ನು ಹೆಚ್ಚಿಸಿದರೆ ಬಡವರು ಇನ್ನಷ್ಟು ಅನ್ಯಾಯಕ್ಕೆ ಒಳಗಾಗಲಿದ್ದಾರೆ. ಆದ್ದರಿಂದ ಮಿತಿಯನ್ನು ಹೆಚ್ಚಿಸಲಾಗದು. ಬೇರೆಯವರು ಎನು ಬೇಕಾದರೂ ಮಾಡಿಕೊಳ್ಳಲಿ, ನಾವು ಮಿತಿಯನ್ನು ಹೆಚ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.


ಗೌರವ ಧನ ಹೆಚ್ಚಳ ಪರಿಶೀಲನೆ
ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಈಗಿರುವ ಐದು ಸಾವಿರ ರೂಪಾಯಿಗಳಿಂದ ಹತ್ತು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಸದನದಲ್ಲಿ ಸೋಮವಾರ ಲಿಖಿತ ಉತ್ತರ ನೀಡಿದ ಆಚಾರ್ಯ ಅವರು, ‘2010-11ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಗೌರವ ಧನ ಪಾವತಿಸಲು 15.49 ಕೋಟಿ ರೂಪಾಯಿಗಳನ್ನು ಇದೇ 11ರಂದು ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಮೊರಾರ್ಜಿ ವಸತಿ ಶಾಲೆ ಶಿಕ್ಷಕರ ಕಾಯಂಗೆ ಕ್ರಮ
ಬೆಂಗಳೂರು:  ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಕಾಯಂಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಪಕ್ಷೇತರ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಲಿಖಿತ ಸಚಿವರು ಉತ್ತರ ನೀಡಿದರು.

‘ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3432 ಶಿಕ್ಷಕರು ಹಾಗೂ 4368 ಶಿಕ್ಷಕೇತರ ಸಿಬ್ಬಂದಿಯನ್ನು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾಯಂಗೊಳಿಸಲು ಸಾಧ್ಯವಿಲ್ಲ. ಆದರೆ, ನೇರ ನೇಮಕಾತಿ ಮಾಡುವಾಗ ಈ ಗುತ್ತಿಗೆ ಶಿಕ್ಷಕರಿಗೆ ಹೆಚ್ಚಿನ ಕೃಪಾಂಕ ನೀಡಲು ನಿಯಮಗಳಲ್ಲಿ ಅನುವು ಮಾಡಲಾಗಿದೆ. ಅದರಂತೆ ಒಂದು ವರ್ಷದ ಸೇವೆಗೆ ಶೇ 5 ಕೃಪಾಂಕದಂತೆ ಗರಿಷ್ಠ 40 ಕೃಪಾಂಕಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT