ADVERTISEMENT

ಸದನದಲ್ಲಿ ಬ್ಲೂ ಫಿಲಂ ಪ್ರಕರಣ:ಬೆಳಗಾವಿ ಸಮಾವೇಶ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಬೆಂಗಳೂರು: ಸಚಿವರು ವಿಧಾನಸಭೆಯಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಪ್ರಕರಣ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿರುವ ಹಿನ್ನೆಲೆಯಲ್ಲಿ ಇದೇ 11ರಂದು ಬೆಳಗಾವಿ ಮತ್ತು ವಿಜಾಪುರದಲ್ಲಿ ಆಯೋಜಿಸಿದ್ದ ಪಕ್ಷದ ವಿಭಾಗೀಯ ಸಮಾವೇಶಗಳನ್ನು ಮುಂದೂಡಲಾಗಿದೆ.

ಸದ್ಯಕ್ಕೆ ಪಕ್ಷದ ವಿರುದ್ಧ ಜನಾಭಿಪ್ರಾಯ ಇದ್ದು, ಈ ಸಂದರ್ಭದಲ್ಲಿ ವಿಭಾಗೀಯ ಸಮಾವೇಶಗಳನ್ನು ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.

ಆದರೆ, ಈ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಲಕ್ಷ್ಮಣ ಸವದಿ ಅವರ ಮತಕ್ಷೇತ್ರವಾದ ಅಥಣಿಯಲ್ಲಿ ಇದೇ 16ರಂದು ವಿವಿಧ ಏತ ನೀರಾವರಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದು, ಅದರಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಂಟಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ದಿನಾಂಕ ಹಿಂದೆಯೇ ನಿರ್ಧಾರ ಆಗಿತ್ತಾದರೂ ಬ್ಲೂ ಫಿಲಂ ಪ್ರಕರಣದ ನಂತರ ಅದನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲು ಸವದಿ ಬೆಂಬಲಿಗರು ನಿರ್ಧರಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ, ಸವದಿ ಅವರು ಶಕ್ತಿಪ್ರದರ್ಶನ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಪಕ್ಷ ಕೂಡ ಬೆಂಬಲವಾಗಿ ನಿಂತಿದೆ ಎನ್ನಲಾಗಿದೆ.

ಚಿಂತನ ಮಂಥನ: ಕ್ಷೇತ್ರದ ಅಭಿವೃದ್ಧಿ ಮತ್ತು ಚುನಾವಣಾ ಸಿದ್ಧತೆ ಕುರಿತು ಶಾಸಕರು ಮತ್ತು ಸಂಸದರಿಗೆ ಸಲಹೆ- ಸೂಚನೆಗಳನ್ನು ನೀಡುವ ಚಿಂತನ- ಮಂಥನ ಶಿಬಿರ ಈ ಹಿಂದೆ ನಿರ್ಧರಿಸಿದಂತೆ ಇದೇ 24 ಮತ್ತು 25ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮುಂದೂಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಜನಪ್ರತಿನಿಧಿಗಳ ನಡತೆ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದರ ಕುರಿತು ಉಪನ್ಯಾಸ ನೀಡುವುದು ಕೂಡ ಶಿಬಿರದ ಹಿಂದಿನ ಉದ್ದೇಶ. ಹೀಗಾಗಿ ಈ ಶಿಬಿರದಲ್ಲಿ `ಬ್ಲೂ ಫಿಲಂ~ ಪ್ರಕರಣವನ್ನು ಮುಂದಿಟ್ಟುಕೊಂಡೇ ಕೆಲ ಸಲಹೆಗಳನ್ನು ನೀಡಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.