ADVERTISEMENT

ಸದನ ಸಮಿತಿ ವರದಿಗೆ ಬಿಜೆಪಿ ಅಸಮ್ಮತಿ

ವಿದ್ಯುತ್ ಖರೀದಿ ಅವ್ಯವಹಾರ: ವರದಿಯಲ್ಲಿ ಶೋಭಾ, ರೇವಣ್ಣ ಹೆಸರು?

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ರಚಿಸಲಾಗಿರುವ ಸದನ ಸಮಿತಿ ವರದಿಗೆ ಬಿಜೆಪಿ ಅಸಮ್ಮತಿ ಸೂಚಿಸಿದೆ.

2011ರಲ್ಲಿ ವಿದ್ಯುತ್ ಖರೀದಿಗಾಗಿ ಟೆಂಡರ್ ಕರೆಯಲಾಗಿತ್ತು. ಜೆಎಸ್‌ಡಬ್ಲ್ಯೂ 20 ವರ್ಷಗಳ ಕಾಲ ₹3.60 ದರದಲ್ಲಿ ಪ್ರತಿ ಯೂನಿಟ್‌ ಪೂರೈಸುವುದಾಗಿ ಹೇಳಿತ್ತು. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಕಡಿಮೆ ದರದಲ್ಲಿ ಪೂರೈಕೆ ಮಾಡಲು ಒಪ್ಪಂದ ಮಾಡಿಕೊಂಡಿರುವ ಜೆಎಸ್‌ಡಬ್ಲ್ಯೂ ಕರ್ನಾಟಕದಲ್ಲಿ ಹೆಚ್ಚಿನ ದರ ನಮೂದಿಸಿದೆ. ಹೀಗಾಗಿ, ಟೆಂಡರ್ ರದ್ದು ಮಾಡಬೇಕು ಎಂದು ಹಣಕಾಸು ಇಲಾಖೆ ಶಿಫಾರಸು ಮಾಡಿತ್ತು.

ಸಚಿವ ಸಂಪುಟ ಇದಕ್ಕೆ ಸಮ್ಮತಿ ಸೂಚಿಸಿತ್ತು. ದೀರ್ಘಕಾಲದ ಟೆಂಡರ್‌ ರದ್ದು ಪಡಿಸಿದ್ದ ಅಂದಿನ ಸರ್ಕಾರ, ಅಲ್ಪಾವಧಿ ಒಪ್ಪಂದದ ಮೇರೆಗೆ ಪ್ರತಿ ಯೂನಿಟ್‌ಗೆ ₹4ರಿಂದ ₹6ರ ದರದಲ್ಲಿ ಜೆಎಸ್‌ ಡಬ್ಲ್ಯೂನಿಂದ ವಿದ್ಯುತ್ ಖರೀದಿಸಿತ್ತು. ದೀರ್ಘಾವಧಿ ಟೆಂಡರ್‌ಗೆ ಹೋಗದೇ ಇದ್ದುದರಿಂದ ಬೊಕ್ಕಸಕ್ಕೆ ₹28,000 ಕೋಟಿ ನಷ್ಟ ಉಂಟಾಗಿದೆ. ಇದಕ್ಕೆ ಅಂದು ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಹೊಣೆ ಎಂದು ಸಮಿತಿಯ ಕರಡು ವರದಿ ಉಲ್ಲೇಖಿಸಿದೆ.

ADVERTISEMENT

ಸದನ ಸಮಿತಿ ಸಭೆಯಲ್ಲಿ ಕರಡು ವರದಿಯನ್ನು ಮಂಡಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ, ಅಂದು ₹3.60ರ ದರದಲ್ಲಿ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದರೆ 2014ರಿಂದ 20 ವರ್ಷ ಕಾಲ ಅದೇ ದರದಲ್ಲಿ ಖರೀದಿಸಬೇಕಾಗುತ್ತಿತ್ತು. ಈಗ ವಿದ್ಯುತ್‌  ದರ ಪ್ರತಿ ಯೂನಿಟ್‌ಗೆ ₹2 ಗೆ ಇಳಿಕೆಯಾಗಿದೆ. ಒಪ್ಪಂದ ಮಾಡಿಕೊಳ್ಳದೇ ಇದ್ದುದರಿಂದ ಲಾಭವಾಗಿದೆ ವಿನಾ ನಷ್ಟವಾಗಿಲ್ಲ ಎಂದು ಪ್ರತಿಪಾದಿಸಿದ್ದರು.

‘ಹೀಗೆ ಮಾಡಿದ್ದರೆ ಹಾಗೆ ಆಗುತ್ತಿತ್ತು, ಮಾಡದೇ ಇದ್ದುದರಿಂದ ಹೀಗಾಗಿದೆ ಎಂಬಂತಹ ಊಹಾತ್ಮಕ ನೆಲೆಯಲ್ಲಿ ವರದಿ ಸಿದ್ಧಪಡಿಸಿದ್ದು ಸರಿಯಲ್ಲ. ರೇವಣ್ಣ ಅವಧಿಯಲ್ಲಿ  ನಡೆದ ಟ್ರಾನ್ಸ್‌ಫಾರ್ಮರ್‌ ಹಾಗೂ ವಿದ್ಯುತ್ ಖರೀದಿಯ ಅಕ್ರಮಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕು. ಅದನ್ನು ಬಿಟ್ಟು ಊಹಾತ್ಮಕ ವರದಿಯನ್ನು ಸದನದ ಮುಂದೆ ಮಂಡಿಸುವುದಾದರೆ ಅಸಮ್ಮತಿ ಸೂಚಿಸುತ್ತೇವೆ. ಅದನ್ನೂ ವರದಿಯಲ್ಲಿ ಅಡಕಗೊಳಿಸಬೇಕು ಎಂದು ಇತ್ತೀಚೆಗೆ ಮತ್ತೊಂದು ಪತ್ರ ಬರೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ರೇವಣ್ಣ ಹೆಸರು ಪ್ರಸ್ತಾಪ: 2004ರಿಂದ 2013ರ ಅವಧಿಯ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ಸದನ ಸಮಿತಿ ವರದಿಯ ಕರಡು ಪ್ರತಿಯಲ್ಲಿ ಜೆಡಿಎಸ್‌ ಶಾಸಕ ಎಚ್.ಡಿ. ರೇವಣ್ಣ ಹೆಸರು ಇದೆ. ಕಲ್ಲಿದ್ದಲು ಖರೀದಿ, ಕಲ್ಲಿದ್ದಲು ತೊಳೆಯುವಿಕೆ ಕುರಿತು ತನಿಖೆ ನಡೆಸಿದ್ದ ನ್ಯಾ. ಮೋಹನ ಕುಮಾರ್ ಆಯೋಗ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಸಲ್ಲಿಸಿದ್ದ ವರದಿಯನ್ನು ಉಲ್ಲೇಖಿಸಿ, ರೇವಣ್ಣ ಅವಧಿಯಲ್ಲಿ
ಆಗಿರುವ ನಷ್ಟದ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ, ಅಂತಿಮ ವರದಿಯಲ್ಲಿ ರೇವಣ್ಣ ಹೆಸರು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಬಾಯಿ ಮುಚ್ಚಿಸುವ ಯತ್ನ: ಸಚಿವ ಡಿಕೆಶಿ
‘ನನ್ನ ಬಾಯಿ ಮುಚ್ಚಿಸುವ ಯತ್ನ ನಡೆಯುತ್ತಿದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಸದಸ್ಯರ ಅಭಿಪ್ರಾಯ ಕ್ರೋಡೀಕರಿಸಿ ಸಿದ್ಧ‍ಪಡಿಸಿದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತೇವೆ’ ಎಂದು ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸೋಮವಾರ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನವೆಂಬರ್‌ 7ರಂದು ಅಂತಿಮ ಸಭೆ ನಡೆಸಲಾಗುವುದು. ಬಿಜೆಪಿ ಸದಸ್ಯರು ಅಂದಿನ ಸಭೆಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಎಲ್ಲರಿಗೂ ಗೌರವಕೊಟ್ಟು ಕರೆಯುತ್ತೇವೆ. ಅದನ್ನು ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಈವರೆಗೆ 13 ಸಭೆ ನಡೆಸಿದ್ದೇವೆ’ ಎಂದರು.

ಬಿಜೆಪಿ, ಜೆಡಿಎಸ್‌ ಸದಸ್ಯರು ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಕಾಂಗ್ರೆಸ್‌ನ ಪಿ.ಎಂ. ನರೇಂದ್ರ ಸ್ವಾಮಿ, ಶಿವಾನಂದ ಪಾಟೀಲ ಇಬ್ಬರೇ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.