ADVERTISEMENT

ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ!

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಮೈಸೂರು: `ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ~ ಎನ್ನುವ ಮಾತು ಕೃಷ್ಣರಾಜಸಾಗರ ಅಣೆಕಟ್ಟೆಯ ಸಮೀಪವೇ ಇರುವ ಗ್ರಾಮಗಳಿಗೆ ಸೂಕ್ತವಾಗಿ ಅನ್ವಯವಾಗುತ್ತದೆ.

ಕನ್ನಡ ನಾಡಿನ ಜೀವ ನದಿ ಕಾವೇರಿ ಈ ಅಣೆಕಟ್ಟೆಯಲ್ಲಿ ತುಂಬಿಕೊಂಡು ಲಕ್ಷಾಂತರ ರೈತರ ಜೀವನಾಡಿಯಾಗಿದ್ದಾಳೆ. ಅಣೆಕಟ್ಟೆಯ ಪಕ್ಕದಲ್ಲಿಯೇ ಇರುವ ಹುಲಿಕೆರೆ, ಬಸ್ತಿಪುರ, ಹೊಸ ಉಂಡುವಾಡಿ, ಬೀಚನಕುಪ್ಪೆ ಗ್ರಾಮಗಳಲ್ಲಿ ಕುಡಿಯಲೂ ನೀರಿಲ್ಲ. ಈ ಗ್ರಾಮಗಳ ಸುಮಾರು ಒಂದೂವರೆ ಸಾವಿರ ಎಕರೆ ಪ್ರದೇಶಗಳಲ್ಲಿ ಕಳೆದ ಎರಡು ವರ್ಷಗಳಿಂದ ಏನನ್ನೂ ಬೆಳೆದಿಲ್ಲ. ಎಲ್ಲವೂ ಪಾಳು ಬಿದ್ದಿವೆ.

ಕೆಆರ್‌ಎಸ್‌ನಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ಹೊಸ ಉಂಡುವಾಡಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. 1,200 ಮತದಾರರಿದ್ದಾರೆ. ಒಟ್ಟು ಜನಸಂಖ್ಯೆ ಎರಡು ಸಾವಿರ. ಇಲ್ಲಿರುವ ಬಹುತೇಕ ಮಂದಿ ಹಳೆ ಉಂಡುವಾಡಿ ಗ್ರಾಮದವರು. ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾದಾಗ ಹಿನ್ನೀರು ಬಂದು ಮನೆ, ಜಮೀನು ಕಳೆದುಕೊಂಡಾಗ ಇಲ್ಲಿ ಅವರಿಗೆ ಪುನರ್‌ವಸತಿ ಕಲ್ಪಿಸಲಾಗಿದೆ. ಇಲ್ಲಿ ಬಂದು ನೆಲೆಸಿದ ದಿನದಿಂದಲೂ ನೀರಿನ ಸಮಸ್ಯೆ ಇದೆ.

ಇಲ್ಲಿಯ ಜನ ಈಗಲೂ ಬಟ್ಟೆ ತೊಳೆಯಲು   ಕೆಆರ್‌ಎಸ್ ಬಳಿ ಇರುವ ಕಾಲುವೆಗೇ ಹೋಗುತ್ತಾರೆ. ಅಲ್ಲಿಯೇ ಮೈ ತೊಳೆದುಕೊಂಡು ಬರುತ್ತಾರೆ. ಸೈಕಲ್, ಎತ್ತಿನ ಗಾಡಿ, ಬೈಕ್‌ಗಳ ಮೇಲೆ ಬಿಂದಿಗೆಗಳಲ್ಲಿ ನೀರನ್ನು ಇಟ್ಟುಕೊಂಡು ಸಾಗುವುದು ಇಲ್ಲಿ ಮಾಮೂಲಿ.

ಹುಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹೊಸಉಂಡುವಾಡಿ ಗ್ರಾಮಕ್ಕೆ ಈಗ 15 ದಿನಗಳ ಹಿಂದಿನವರೆಗೂ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿತ್ತು.

ಈಗ ಆರ್.ಬಿ. ಕಾಲುವೆಯಲ್ಲಿಯೇ ಮೋಟಾರು ಅಳವಡಿಸಿ ಈ ಗ್ರಾಮಕ್ಕೆ ದಿನ ಬಿಟ್ಟು ದಿನ ನೀರು ಬಿಡುವ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. `ವಿದ್ಯುತ್ ಸಮಸ್ಯೆಯಿಂದ ಈಗಲೂ ನೀರು ಸರಿಯಾಗಿ ಬರುತ್ತಿಲ್ಲ~ ಎಂದು ಗ್ರಾಮಸ್ಥರು ದೂರುತ್ತಾರೆ. ನೀರು ಭರ್ತಿ ಮಾಡಲು ಕಟ್ಟಿದ ಟ್ಯಾಂಕ್‌ಗಳು 15 ವರ್ಷಗಳಿಂದ ನೀರನ್ನೇ ಕಾಣದೆ ಪಾಳು ಬಿದ್ದಿವೆ.

`ನಮ್ಮೂರಲ್ಲಿ ಹಬ್ಬಕ್ಕೂ ನೀರಿಲ್ಲ, ಹುಣ್ಣಿಮೆಗೂ ನೀರಿಲ್ಲ. ಕಾವೇರಿ ಮಾತೆ ಪಕ್ಕದಲ್ಲೇ ಹರೀತಾಳೆ. ಆದರೆ ನಮ್ಮೂರಿಗೆ ಬರಲ್ಲ. ಹೆಂಗಾದರೂ ಮಾಡಿ ನಮ್ಮೂರಿಗೆ ನೀರು ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ` ಎಂದು ತಲೆಯ ಮೇಲೆ ಬಿಂದಿಗೆ ಇಟ್ಟುಕೊಂಡು ಒಂದು ಮೈಲಿ ದೂರದಿಂದ ನೀರು ತರುತ್ತಿದ್ದ ಗೌರಮ್ಮ ಗೋಗರೆಯುತ್ತಾರೆ.

ಈ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಕೊಳವೆ ಬಾವಿಗಳನ್ನು ಕೊರೆದರೆ ನೀರೇ ಬರುವುದಿಲ್ಲ. 300ರಿಂದ 400 ಅಡಿ ಆಳಕ್ಕೆ ಕೊರೆದರೂ ನೀರು ಸಿಗುವುದು ಕಷ್ಟ.

ಕೃಷ್ಣರಾಜಸಾಗರದ ಪಕ್ಕದಲ್ಲಿಯೇ ಇರುವ ಗ್ರಾಮ, ಸುತ್ತಲೂ ಕಾವೇರಿ ಹಿನ್ನೀರು ತುಂಬಿಕೊಂಡಿರುವ ಈ ಗ್ರಾಮದಲ್ಲಿ ಅಂತರ್ಜಲ ಕುಸಿಯಲು ಏನು ಕಾರಣ ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ. ಗ್ರಾಮದಲ್ಲಿ 50ಕ್ಕೂ ಹೆಚ್ಚು ವಿಫಲ ಕೊಳವೆ ಬಾವಿಗಳು ಇವೆ. ಹುಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ ಇದೆ.

ಗ್ರಾಮದಲ್ಲಿ ನಿಂತು ಕತ್ತು ಎತ್ತಿ ನೋಡಿದರೆ ಕಾವೇರಿ ನೀರು ಕಾಣಿಸುತ್ತದೆ. ಆದರೆ ಹುಲಿಕೆರೆ, ಬಸ್ತಿಪುರ, ಬೀಚನಕುಪ್ಪೆ, ಹೊಸ ಉಂಡುವಾಡಿ ಗ್ರಾಮಗಳಿಗೆ ನೀರಾವರಿ ಕಾಲುವೆಗಳು ಇಲ್ಲ. ಎರಡು ವರ್ಷದಿಂದ ಈ ಪ್ರದೇಶದಲ್ಲಿ ಸೂಕ್ತ ಮಳೆಯಾಗಿಲ್ಲ. ಹುರುಳಿ, ಜೋಳ, ರಾಗಿ ಮುಂತಾದವುಗಳನ್ನು ಬೆಳೆಯುತ್ತಿದ್ದ ರೈತರು ಎರಡು ವರ್ಷದಿಂದ ಏನನ್ನೂ ಬೆಳೆಯದೆ ಭೂಮಿಯನ್ನು ಖಾಲಿ ಬಿಟ್ಟಿದ್ದಾರೆ. ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಕೂಲಿಗೆ ಹೋಗುತ್ತಿದ್ದಾರೆ.

ಇಲ್ಲಿಯ ಜನ ಎಷ್ಟು ಬೇಸತ್ತಿದ್ದಾರೆ ಎಂದರೆ, `ಜಮೀನಿಗೆ ನೀರು ಕೊಡುವುದು ಬ್ಯಾಡ ಸ್ವಾಮಿ. ಕೂಲಿನಾಲಿ ಮಾಡಿಕೊಂಡು ಬದುಕಿಕೊಳ್ಳುತ್ತೀವಿ. ಜೀವ ಉಳಿಸಿಕೊಳ್ಳುವುದಕ್ಕೆ ಒಂದಿಷ್ಟಾದರೂ ಕುಡಿಯಲು ನೀರು ಕೊಡಿ~ ಎಂದು ಬೇಡುತ್ತಾರೆ.

ಇನ್ನೂ ಅಚ್ಚರಿಯ ಅಂಶ ಎಂದರೆ, ಸಂಗೀತ ಕಾರಂಜಿಯಿಂದ ವಿಶ್ವದ ಜನರನ್ನು ತನ್ನತ್ತ ಸೆಳೆಯುವ, ಅಣೆಕಟ್ಟೆಯ ಹಿಂಭಾಗದಲ್ಲಿ ಸಮುದ್ರದಂತೆ ಕಾಣುವ ಕೃಷ್ಣರಾಜಸಾಗರ ಅಣೆಕಟ್ಟೆಯ ಬುಡದಲ್ಲಿಯೇ ಇರುವ ಕೃಷ್ಣರಾಜಸಾಗರ ಗ್ರಾಮದ ಕೆಲವು ಭಾಗಕ್ಕೆ ಈಗಲೂ ಕೊಳವೆ ಬಾವಿಯ ನೀರನ್ನೇ ಪೂರೈಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.