ADVERTISEMENT

ಸರ್ಕಾರದಿಂದ ವೀರಶೈವ--–ಲಿಂಗಾಯತ ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 3:56 IST
Last Updated 12 ಮಾರ್ಚ್ 2018, 3:56 IST
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶದಲ್ಲಿ ಶಿವಕುಮಾರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶದಲ್ಲಿ ಶಿವಕುಮಾರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು.   

ತುಮಕೂರು: ವೀರಶೈವ–ಲಿಂಗಾಯತ ಎರಡೂ ಒಂದೇ. ರಾಜಕೀಯ ಉದ್ದೇಶಕ್ಕಾಗಿ ಸಮಾಜ ಒಡೆಯುವುದು ಸರಿಯಲ್ಲ ಎಂದು ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಭಾನುವಾರ ನಡೆದ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಒಂಬತ್ತನೇ ಸಮಾವೇಶದಲ್ಲಿ ರಾಜಕೀಯ ಮುಖಂಡರು ಹಾಗೂ ನಿವೃತ್ತ ಅಧಿಕಾರಿಗಳು ಪ್ರತಿಪಾದಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಸಮಾಜದಲ್ಲಿ ಹಿರಿಯ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳು ಇದ್ದಾರೆ. ಆದರೆ ಯಾವುದೇ ಆಯಾಕಟ್ಟಿನ ಹುದ್ದೆಗಳಲ್ಲಿ ಯಾರನ್ನೂ ನೇಮಿಸಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ನಿದರ್ಶನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಹೇಳಿದ್ದಾರೆ. ಆದರೂ ಹಟಕ್ಕೆ ಬಿದ್ದಿರುವ ಸರ್ಕಾರ ಸಮಾಜವನ್ನು ಒಡೆಯಲು ಮುಂದಾಗಿದೆ. ಸಮುದಾಯ ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಒತ್ತಿ ಹೇಳಿದರು.

ADVERTISEMENT

‘ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರುವುದು ಯಡಿಯೂರಪ್ಪನ ಸರ್ಕಾರ ಅಲ್ಲ. ಅದು ನಿಮ್ಮ ಸರ್ಕಾರ. ಸಮಾಜದವರು ಬಸವಣ್ಣನ ತತ್ವಗಳನ್ನು ಅನುಸರಿಸುವ ಮೂಲಕ ಎಲ್ಲ ಸಮುದಾಯದವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬೇಕು’ ಎಂದರು.

ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಮಹಾಸಭೆ ಯಾವುದೇ ಪಕ್ಷಕ್ಕೂ ಅಂಟಿಕೊಂಡಿಲ್ಲ. ಸ್ವತಂತ್ರವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನೀವೆಲ್ಲರೂ ವೀರಶೈವ ಲಿಂಗಾಯತ ಒಂದೇ ಎಂದು ಒಕ್ಕೊರಲಿನಿಂದ ಹೇಳುತ್ತಿದ್ದೀರಿ. ಮಹಾಸಭೆಯ ನಿರ್ಧಾರವೂ ಇದೇ ಆಗಿದೆ. ಇದರ ವಿರುದ್ಧ ಯಾವುದೇ ನಿರ್ಣಯ ಕೈಗೊಂಡರೂ ಅದು ಸಿದ್ಧಿಯಾಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ‘ಪ್ರತ್ಯೇಕ ಧರ್ಮದ ವಿಚಾರವಾಗಿ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರ ಸುಮ್ಮನಿತ್ತು. ಯಡಿಯೂರಪ್ಪ ಅವರನ್ನು ಬಿಜೆಪಿ ವರಿಷ್ಠರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣವೇ ಸಮಾಜದಲ್ಲಿ ಒಡಕು ಮೂಡಿಸಲಾಯಿತು’ ಎಂದರು.

‘ಒಡೆದು ಆಳುವ ನೀತಿ ಚಾಣಕ್ಯನ ಕಾಲದಿಂದಲೂ ಇದೆ. ಆದರೆ ಧರ್ಮವನ್ನೇ ಒಡೆಯುವ ಕೆಲಸವನ್ನು ಇಲ್ಲಿಯವರೆಗೆ ಯಾರೂ ಮಾಡಿಲ್ಲ. ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡುವರು’ ಎಂದು ಹೇಳಿದರು.

ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ನಿವೃತ್ತ ಜಿಲ್ಲಾಧಿಕಾರಿ ಸಿ.ಸೋಮಶೇಖರ್, ಬಿಜೆಪಿ ಮುಖಂಡ ಜಿ.ಎಸ್.ಬಸವರಾಜು, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ನಿರಂಜನ್, ಗೌರವಾಧ್ಯಕ್ಷ ಎ.ಎಂ.ಶಿವಶಂಕರ್ ವೀರಶೈವ ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದರು.

‘ಶಿಫಾರಸು ಮಾಡಲು ಆಗ್ರಹ’

ಬೀದರ್: ‘ಮಾ.14ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಳ್ಳಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಆಗ್ರಹಿಸಿದರು.

‘ಲಿಂಗಾಯತರು ಹಾಗೂ ವೀರಶೈವರು ನೀಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ನೇತೃತ್ವದ ಸಮಿತಿಯು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಶಿಫಾರಸು ಮಾಡಬಹುದು ಎಂದು ಹೇಳಿದೆ. ವರದಿಯ ಚರ್ಚೆಗೆ ಆಸ್ಪದ ಕೊಡದೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.

ಗೊಂದಲಕ್ಕೆ 14ರಂದು ತೆರೆ: ಸಿಹಿ ಸುದ್ದಿ

ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಇದುವರೆಗಿನ ಎಲ್ಲ ಗೊಂದಲಗಳಿಗೆ ಮಾರ್ಚ್‌ 14ರಂದು ತೆರೆ ಬೀಳಲಿದ್ದು, ಸಿಹಿ ಸುದ್ದಿ ಸಿಗುವುದು ಖಚಿತ’ ಎಂದು ಸಚಿವ ಎಂ.ಬಿ.ಪಾಟೀಲ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸಂಪುಟವು, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿನ ವಾದ–ವಿವಾದ ಇದೀಗ ಮುಗಿದ ಅಧ್ಯಾಯ. ಸಂಪುಟ ಸಭೆಯ ಬಳಿಕ ಪಂಚಪೀಠಾಧೀಶ್ವರರು, ವೀರಶೈವ ಲಿಂಗಾಯತ ಪ್ರತಿಪಾದಕರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಜಂಗಮ ಸಮಾಜದ ಪ್ರಮುಖರನ್ನು ಭೇಟಿಯಾಗಿ ಈ ಕುರಿತಂತೆ ಚರ್ಚಿಸುವೆ’ ಎಂದು ಸಚಿವ ಪಾಟೀಲ ಹೇಳಿದರು.

‘ಇದುವರೆಗೆ ಎರಡೂ ಬಣಗಳು ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಹೋರಾಟ ನಡೆಸಿವೆ. ಆದರೆ, ಭಿನ್ನಾಭಿಪ್ರಾಯ ಇದ್ದದ್ದು ಲಿಂಗಾಯತ, ವೀರಶೈವ ಲಿಂಗಾಯತ ಎಂಬ ಪದ ಬಳಕೆ ಕುರಿತಂತೆ ಮಾತ್ರ’ ಎಂದರು.

ಧರ್ಮ ಒಡೆಯುವವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ‘ನಮಗೂ ಪಾಠ ಕಲಿಸಲು ಬರುತ್ತದೆ. ಆದರೆ ಅವರು ಗುರುಗಳು. ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.