ADVERTISEMENT

ಸರ್ಕಾರದಿಂದ ವೇಳಾಪಟ್ಟಿ, ಶುಲ್ಕಪಟ್ಟಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಪ್ರವೇಶ ನೀಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ವೇಳಾಪಟ್ಟಿ ಪ್ರಕಟಿಸಿದ್ದು, ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರವೇಶ ಸಂದರ್ಭದಲ್ಲಿ ವಸೂಲಿ ಮಾಡಬೇಕಾದ ಶುಲ್ಕವನ್ನೂ ಇಲಾಖೆಯೇ ನಿಗದಿ ಮಾಡಿದೆ.

ಒಂದರಿಂದ ದ್ವಿತೀಯ ಪಿಯುಸಿವರೆಗೆ ಪ್ರವೇಶ ನೀಡುವಾಗ ಕಡ್ಡಾಯವಾಗಿ ವೇಳಾಪಟ್ಟಿ ಪಾಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು (ಪ್ರೌಢಶಿಕ್ಷಣ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ವೇಳಾಪಟ್ಟಿ ಪ್ರಕಟಣೆ- ಏಪ್ರಿಲ್ 10, ಅರ್ಜಿ ವಿತರಣೆ- ಏಪ್ರಿಲ್ 20ರಿಂದ 30, ಅರ್ಜಿ ಸ್ವೀಕರಿಸಲು ಕೊನೆ ದಿನ- ಏಪ್ರಿಲ್ 30, ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ- ಮೇ 3, ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಡೆ ದಿನ- ಮೇ 5, ಪ್ರಥಮ ಆಯ್ಕೆ ಪಟ್ಟಿ ಪ್ರಕಟಣೆ- ಮೇ 6, ಪ್ರಥಮ ಆಯ್ಕೆಪಟ್ಟಿಯಲ್ಲಿರುವವರು ಪ್ರವೇಶ ಪಡೆಯಲು ಕೊನೆಯ ದಿನ- ಮೇ 15, ದ್ವಿತೀಯ ಆಯ್ಕೆ ಪಟ್ಟಿ ಪ್ರಕಟಣೆ- ಮೇ 16, ಆ ಪಟ್ಟಿಯಲ್ಲಿರುವವರು ಪ್ರವೇಶ ಪಡೆಯಲು ಕೊನೆಯ ದಿನ- ಮೇ 20.

ಖಾಸಗಿ ವಲಯದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ ವಸೂಲಿ ಮಾಡಬಹುದಾದ ಗರಿಷ್ಠ ಶುಲ್ಕವನ್ನೂ ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ನಿಯಂತ್ರಣ ಕೊಠಡಿಗೆ ದೂರು ಸಲ್ಲಿಸಬಹುದು.

ಶುಲ್ಕದ ವಿವರ: 1ರಿಂದ 5ನೇ ತರಗತಿ- ಅನುದಾನಿತ ಶಾಲೆಗಳಲ್ಲಿ ಯಾವುದೇ ಶುಲ್ಕ ಪಡೆಯುವಂತಿಲ್ಲ. ಅನುದಾನರಹಿತ ಶಾಲೆಗಳಲ್ಲಿ ಒಟ್ಟು ವೇತನ ಮತ್ತು ಅದರ ಶೇ. 30ರಷ್ಟು ಮೊತ್ತವನ್ನು ಹಿಂದಿನ ಬಾರಿಯ ವಿದ್ಯಾರ್ಥಿಗಳಿಂದ ಭಾಗಿಸಿದಾಗ ಬರುವ ಮೊತ್ತವನ್ನು ಬೋಧನಾ ಶುಲ್ಕವಾಗಿ ಮತ್ತು ರೂ 600 ವಿಶೇಷ ಅಭಿವೃದ್ಧಿ ಶುಲ್ಕ ವಸೂಲಿ ಮಾಡಬಹುದು.

6 ಮತ್ತು 7ನೇ ತರಗತಿ- ಅನುದಾನಿತ ಶಾಲೆಗಳಲ್ಲಿ ರೂ 38 ಬೋಧನೇತರ ಶುಲ್ಕ ಮತ್ತು ರೂ 500 ವಿಶೇಷ ಅಭಿವೃದ್ಧಿ ಶುಲ್ಕಕ್ಕೆ ಅವಕಾಶವಿದೆ. ಅನುದಾನರಹಿತ ಶಾಲೆಗಳಲ್ಲಿ ರೂ 38 ಬೋಧನೇತರ ಶುಲ್ಕ ಹಾಗೂ 1ರಿಂದ 5ನೇ ತರಗತಿವರೆಗಿನ ಮಾದರಿಯಲ್ಲೇ ಬೋಧನಾ, ವಿಶೇಷ ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶವಿದೆ.

8ರಿಂದ 10ನೇ ತರಗತಿ- ಅನುದಾನಿತ ಶಾಲೆಗಳಲ್ಲಿ ರೂ 185 ಬೋಧನೇತರ ಶುಲ್ಕ, ರೂ 500 ವಿಶೇಷ ಅಭಿವೃದ್ಧಿ ಶುಲ್ಕ, ಮಾಸಿಕ ರೂ 10 ಬೋಧನಾ ಶುಲ್ಕ ವಸೂಲಿಗೆ ಅವಕಾಶವಿದೆ. 8, 9 ಮತ್ತು 10ನೇ ತರಗತಿ ಅನುತ್ತೀರ್ಣರಾದವರು ಅನುಕ್ರಮವಾಗಿ ರೂ 40, 50 ಮತ್ತು 55 ಬೋಧನಾ ಶುಲ್ಕ ಪಾವತಿಸಬೇಕು.

ಅನುದಾನರಹಿತ ಶಾಲೆಗಳಲ್ಲಿ ರೂ 185 ಬೋಧನೇತರ ಶುಲ್ಕ ಮತ್ತು 1ರಿಂದ 5ನೇ ತರಗತಿ ಮಾದರಿಯಲ್ಲೇ ಬೋಧನಾ, ವಿಶೇಷ ಅಭಿವೃದ್ಧಿ ಶುಲ್ಕ ವಸೂಲಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.