ADVERTISEMENT

ಸರ್ಕಾರಿ ಪಶು ವೈದ್ಯಾಧಿಕಾರಿ ಸಾಧನೆ; ಶ್ವಾನಗಳಿಗೂ ರಕ್ತ ಪೂರಣ!

ರಾಜೇಶ್ ರೈ ಚಟ್ಲ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST

ಹುಬ್ಬಳ್ಳಿ: ಇಂದು (ಜೂನ್ 14) ರಕ್ತ ದಾನಿಗಳ ದಿನ. ಜೀವಜಂತುಗಳಿಗೆ ರಕ್ತ ಜೀವದ್ರವ್ಯ. ರಕ್ತ ದಾನ ಮಾಡಿ ಇನ್ನೊಂದು ಜೀವ ಉಳಿಸುವುದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ. ಆದರೆ, ಇಲ್ಲೊಬ್ಬರು ಸರ್ಕಾರಿ ಪಶು ವೈದ್ಯಾಧಿಕಾರಿ ನಿಯತ್ತು, ಸ್ವಾಮಿ ನಿಷ್ಠೆಗೆ ಪರ್ಯಾಯ ಎಂದೇ ಗುರುತಿಸಿಕೊಂಡ ಶ್ವಾನಗಳಿಗೂ ರಕ್ತ ಪೂರಣ ಮೂಲಕ  `ಜೀವ~ಸೆಲೆಯಾಗಿದ್ದಾರೆ!

19 ವರ್ಷಗಳಿಂದ ಸರ್ಕಾರಿ ಪಶು ವೈದ್ಯಾಧಿಕಾರಿಯಾಗಿರುವ, ಸದ್ಯ ಇಲ್ಲಿನ ಗೋಕುಲ್ ಪಶು ಚಿಕಿತ್ಸಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ, ಮೂಲತಃ ಗದಗ ಜಿಲ್ಲೆ ರೋಣ ನಿವಾಸಿ ಡಾ. ಎಸ್.ಜಿ. ರೋಣ ಈ ಅಪರೂಪದ ಸಾಧಕ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಸರ್ಕಾರೇತರ ಸಂಸ್ಥೆ ಕ್ಯೂಪಾ ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿ ಶ್ವಾನಗಳಿಗೆ ರಕ್ತ ಪೂರಣ ಮಾಡುತ್ತಿರುವವರು ಡಾ. ರೋಣ ಮಾತ್ರ. ಮೂರು ಲ್ಯಾಬ್ರಡಾರ್ ತಳಿಯ ಶ್ವಾನಗಳನ್ನು ಸಾಕುತ್ತಿರುವ ಅವರು, ಅವುಗಳಿಂದ ತೆಗೆದ ರಕ್ತವನ್ನು ರಕ್ತ ಹೀನತೆಯಿಂದ (ಹಿಮೊಗ್ಲೋಬಿನ್ ಕೊರತೆ) ನರಳುತ್ತಿರುವ, ರಕ್ತ ಸ್ರಾವದಿಂದ ಸಾವಿನಂಚಿಗೆ ತಲುಪಿರುವ ಹಲವು ಶ್ವಾನಗಳಿಗೆ ಪೂರಣ ಮಾಡಿ ಜೀವ ರಕ್ಷಿಸಿದ್ದಾರೆ. ವಿಶೇಷವೆಂದರೆ, ರಕ್ತಹೀನತೆಯಿಂದ ಶ್ವಾನ ನರಳುತ್ತಿದೆ ಎನ್ನುವುದನ್ನು ಪತ್ತೆಹಚ್ಚಲು ರೋಣ ಅವರ ಬಳಿ ಸುಸಜ್ಜಿತ ಪ್ರಯೋಗಾಲಯ ಅಥವಾ ಸ್ಕ್ಯಾನಿಂಗ್ ಸೆಂಟರ್ ಇಲ್ಲ!

`ಯುವ, ಆರೋಗ್ಯವಂತ, ಎರಡರಿಂದ ಆರು ವರ್ಷದ ಸ್ಥಳೀಯ ಶ್ವಾನಗಳನ್ನೂ ರಕ್ತ ದಾನಿಯಾಗಿ ಬಳಸಿಕೊಳ್ಳಬಹುದು. ಆದರೆ, ದಾನಿ ಶ್ವಾನಗಳಿಗೆ ಲಸಿಕೆ ಹಾಕಿಸಿರಬೇಕು. ಆಂತರಿಕ, ಬಾಹ್ಯ ರೋಗಗಳಿಂದ ಅವು ಮುಕ್ತವಾಗಿರಬೇಕು. ಅವುಗಳು ಕನಿಷ್ಠ 25 ಕೆ.ಜಿ ತೂಕ ಹೊಂದಿರಬೇಕು. 3-4 ವಾರಗಳಿಗೊಮ್ಮೆ ಇಂತಹ ಶ್ವಾನಗಳಿಂದ ರಕ್ತ ತೆಗೆಯಲು ಸಾಧ್ಯ.
 
ಶ್ವಾನಗಳ ದೇಹ ತೂಕಕ್ಕೆ ಅನುಸಾರವಾಗಿ, ಅವುಗಳ ಪ್ರಜ್ಞೆ ತಪ್ಪಿಸಿ ಒಂದು ಕೆಜಿಗೆ 20 ಎಂ.ಎಲ್ (ಅಂದರೆ 25 ಕೆಜಿ ತೂಕವಿರುವ ಶ್ವಾನದಿಂದ 500 ಎಂ.ಎಲ್) ರಕ್ತ ತೆಗೆಯಬಹುದು. ಮನುಷ್ಯನಿಂದ ರಕ್ತ ತೆಗೆಯುವ ಮಾದರಿಯಲ್ಲೆ ರಕ್ತ ಸಂಗ್ರಹಿಸಬಹುದು. ಮೂರು ವಾರದವರೆಗೆ ಶ್ವಾನದ ರಕ್ತವನ್ನು ಸಂರಕ್ಷಿಸಿ ಇಟ್ಟುಕೊಳ್ಳಬಹುದು~ ಎನ್ನುತ್ತಾರೆ ಅವರು.

`ಶ್ವಾನಗಳಲ್ಲಿ ಎಂಟು ವಿಧದ ರಕ್ತ ಗುಂಪುಗಳಿವೆ. ಅವುಗಳನ್ನು `ಡಾಗ್ ಎರಿಥ್ರೋಸೈಟ್ ಅಂಟಿಜೆನ್~ (ಡಿಇಎ) 1.1, 1.2, 3, 4, 5, 6, 7 ಮತ್ತು ಡಿಇಎ 8 ಎಂದು ವಿಂಗಡಿಸಲಾಗಿದೆ. ಡಿಇಎ 1.1 ಮತ್ತು 1.2 ರಕ್ತ ಗುಂಪುಗಳು  ಸೇರಿದರೆ ಹೆಪ್ಪುಗಟ್ಟುತ್ತದೆ. ಹೀಗಾಗಿ ರಕ್ತ ಸರಿಹೊಂದುತ್ತದೆಯೇ ಎಂದು ಪರೀಕ್ಷೆ ಮಾಡಿದ ಬಳಿಕ ಪೂರಣ ಮಾಡಬೇಕಾಗುತ್ತದೆ. ಶ್ವಾನಗಳ ರಕ್ತವನ್ನೂ ಕೆಂಪು ರಕ್ತ ಕಣ, ಪ್ಲಾಸ್ಮಾ, ಕಿಯೋಪ್ರೆಸಿಪಿಟೇಟ್ ಮತ್ತು ಪ್ಲೇಟ್ಲೆಟ್ಸ್ ಎಂದು ಬೇರ್ಪಡಿಸಿ ನೀಡಬಹುದು. ಇತ್ತೀಚೆಗೆ ಶೇ 50ರಷ್ಟು ಶ್ವಾನಗಳು ಹಿಮೋಗ್ಲೋಬಿನ್ ಕೊರತೆಯಿಂದ ಸಾವಿಗೀಡಾಗುತ್ತಿವೆ~ ಎನ್ನುತ್ತಾರೆ ಅವರು.

`ಇಂಡಿಯನ್ ಸೊಸೈಟಿ ಫಾರ್ ಅಡ್ವಾನ್ಸ್‌ಮೆಂಟ್ ಆಫ್ ಕೆನೈನ್ ಪ್ರಾಕ್ಟಿಸ್~ ನೀಡುವ 2012ನೇ ಸಾಲಿನ `ಶ್ವಾನಗಳ ಅತ್ಯುತ್ತಮ ಶಸ್ತ್ರಚಿಕಿತ್ಸಕ~ ಪ್ರಶಸ್ತಿಯನ್ನು ರಾಜಸ್ತಾನದ ಬಿಕಾನೇರ್ ಪಶು ಹಾಗೂ ಔಧೀಯ ವಿವಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ. ರೋಣ ಅವರಿಗೆ ನೀಡಲಾಗಿದೆ.
 
`ಪ್ರಾಣಿಗಳ ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ (ಶ್ವಾನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ)~ ಕುರಿತು ಸ್ನಾತಕೋತ್ತರ  ಪದವಿ (ಮಾಸ್ಟರ್ ಆಫ್ ವೆಟರ್ನರಿ) ಮುಗಿಸಿರುವ ಅವರು, ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನ `ಡಾಗ್ ಸ್ಕ್ವಾಡ್~ ಶ್ವಾನಗಳ ಚಿಕಿತ್ಸೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.