ADVERTISEMENT

ಸಾವಿರ ವಿವಿ ಸ್ಥಾಪನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:00 IST
Last Updated 2 ಏಪ್ರಿಲ್ 2011, 19:00 IST
ಸಾವಿರ ವಿವಿ ಸ್ಥಾಪನೆ ಅಗತ್ಯ
ಸಾವಿರ ವಿವಿ ಸ್ಥಾಪನೆ ಅಗತ್ಯ   

ಬೆಂಗಳೂರು: ‘ದೇಶದ ಜನಸಂಖ್ಯೆಗೆ ಅಗತ್ಯವಿರುವ ಶಿಕ್ಷಣ ನೀಡಲು ಪ್ರಸ್ತುತ ಒಂದು ಸಾವಿರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) 22ನೇ ಘಟಿಕೋತ್ಸವದಲ್ಲಿ ನವದೆಹಲಿಯಿಂದ ‘ದೂರದರ್ಶನ’ ವಾಹಿನಿ ಮೂಲಕ ಭಾಷಣ ಮಾಡಿದ ಅವರು ‘ದೇಶದ ಎಲ್ಲಾ ಜನರಿಗೆ ಶಿಕ್ಷಣ ನೀಡಲು ತಂತ್ರಜ್ಞಾನದ ಬಲ ಹೊಂದಿರುವ ದೂರಶಿಕ್ಷಣವೊಂದೇ ಸೂಕ್ತ ಸಾಧನವಾಗಿದೆ’ ಎಂದರು.

‘ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಕುಶಲ ಕೆಲಸಗಾರರ ಅಗತ್ಯವಿದ್ದು ಈ ಬೇಡಿಕೆಯನ್ನು ಈಡೇರಿಸಲು ದೇಶದ ಶಿಕ್ಷಣ ವ್ಯವಸ್ಥೆಯನ್ನು ಚುರುಕುಗೊಳಿಸುವ ಅಗತ್ಯವಿದೆ’ ಎಂದು ತಿಳಿಸಿದರು. ವೈಮಾನಿಕ ಅಭಿವೃದ್ಧಿ ಸಂಸ್ಥೆಯ  ನಿರ್ದೇಶಕ ಡಾ.ಪಿ.ಎಸ್.ಕೃಷ್ಣನ್ ಮಾತನಾಡಿ ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ನಾಯಕರ ದೂರದೃಷ್ಟಿಯ ಫಲವಾಗಿ ಚಂದ್ರನಲ್ಲಿಗೆ ತೆರಳುವ ಚಂದ್ರಯಾನ್ ಯೋಜನೆ ಸಾಕಾರಗೊಂಡಿದೆ. ಇದು ದೇಶದ ವೈಜ್ಞಾನಿಕ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲಿದೆ. ವೈಮಾನಿಕ ಕ್ಷೇತ್ರ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಮಹತ್ವದ ಬದಲಾವಣೆಗೆ ಶಿಕ್ಷಣ ಕಾರಣವಾಗಿದೆ’ ಎಂದು ಹೇಳಿದರು.

ವಿವಿ ಕುಲಪತಿ ಡಾ.ವಿ.ಎನ್.ರಾಜಶೇಖರನ್ ಪಿಳ್ಳೈ ಮಾತನಾಡಿ ‘ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿರುವುದರಿಂದ ಇಗ್ನೊ ಜನಪ್ರಿಯತೆ ಹೆಚ್ಚಿದೆ. ದೇಶದೆಲ್ಲೆಡೆ ಅಧ್ಯಯನ ಕೇಂದ್ರಗಳನ್ನು ತೆರೆಯುವ ಮೂಲಕ ಸ್ಥಳೀಯ ಜನರನ್ನು ವಿವಿ ತಲುಪಿದೆ’ ಎಂರು.  ‘ಒಟ್ಟಾರೆ 17,744 ವಿದ್ಯಾರ್ಥಿಗಳು ಈ ಬಾರಿ ಪದವಿ ಪಡೆದಿದ್ದು 9,990 ಮಂದಿಗೆ ಸ್ನಾತಕೋತ್ತರ ಪದವಿ  ನೀಡಲಾಗಿದೆ. 6067 ಮಂದಿ ಪದವಿ ಪಡೆದಿದ್ದಾರೆ. 1064 ಮಂದಿಗೆ ಸ್ನಾತಕೋತ್ತರ ಡಿಪ್ಲೊಮಾ ಪ್ರದಾನ ಮಾಡಲಾಗಿದೆ. 617  ಮಂದಿ ಸರ್ಟಿಫಿಕೇಟ್ ಪದವಿ ಪಡೆದಿದ್ದಾರೆ’ಎಂದರು. ವಿವಿಯ ಪ್ರಾದೇಶಿಕ ನಿರ್ದೇಶಕ ಡಾ.ಬಿ.ಎಂ.ಅಗರ್‌ವಾಲ್, ಸಹಯಕ ಪ್ರಾದೇಶಿಕ ನಿರ್ದೇಶಕ ಡಾ.ಜಿ.ಎಚ್.     ಇಮ್ರಾಪುರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.