ADVERTISEMENT

ಸಿಂದಗಿಯಲ್ಲಿ ಕಲ್ಲು ತೂರಾಟ, ಲಾಠಿ ಪ್ರಹಾರ

ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಸಿಂದಗಿ (ವಿಜಾಪುರ ಜಿಲ್ಲೆ): ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವದ ಅಂಗವಾಗಿ ಮಂಗಳ ವಾರ ಇಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದಲ್ಲಿ  ಹಲವರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ನಿರತರಾಗಿದ್ದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಟಿಪ್ಪು ಸುಲ್ತಾನ್‌ ಯುವ ಸಮಾಜ ಸೇವಾ ಸಂಘ ಹಾಗೂ ಟಿಪ್ಪು ಸುಲ್ತಾನ್‌ ಸಂಘರ್ಷ ಸಮಿತಿ ಸಹಯೋಗದಲ್ಲಿ ಈ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ವಿವೇಕಾನಂದ ಚೌಕಕ್ಕೆ ಬರುತ್ತಿದ್ದಂತೆಯೇ ಎರಡು ಗುಂಪುಗಳ ಮಧ್ಯೆ ಏಕಾಏಕಿ ಕಲ್ಲು ತೂರಾಟ ಆರಂಭಗೊಂಡಿತು.

ಪೊಲೀಸ್‌ ವಾಹನ, ಎರಡು ಖಾಸಗಿ ಜೀಪ್‌ಗಳು ಜಖಂಗೊಂಡವು.  ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆ, ನೀಲಗಂಗಾ ರಸ್ತೆಯಲ್ಲಿನ ಮನೆಗಳು, ಹಳೆಯ ಬಜಾರ್‌ದಲ್ಲಿನ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಜುಗಳು ಪುಡಿಪುಡಿಯಾದವು. ಬೀದಿ ದೀಪಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲುಗಳು ಸ್ಟೇಟ್‌ ಬ್ಯಾಂಕ್‌ ಮೈಸೂರು ಶಾಖೆಯೊಳಗೆ ತೂರಿ ಬಂದು, ಗ್ರಾಹಕ ರೊಬ್ಬರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಿರಣ ಶಿವಶಿಂಪಿ ಗೇರ ಎಂಬ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗೆ ತೆರಳಿದ್ದ ಪತ್ರಕರ್ತರೊಬ್ಬರಿಗೂ ಕಲ್ಲೇಟು ಬಿದ್ದಿದೆ.

ಮಧ್ಯಾಹ್ನ ವಿವೇಕಾನಂದ ಚೌಕದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣ ವಾಗಿತ್ತು. ಘಟನೆಯಿಂದ ಭಯಬೀತರಾದ ವರ್ತಕರು ಹಳೆಯ ಬಜಾರ್‌ನಲ್ಲಿ ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಿದ್ದರಿಂದ  ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ ಅಶ್ವತ್ಥನಾರಾಯಣ ಶಾಸ್ತ್ರಿ, ಪರಿಸ್ಥಿತಿ ನಿಯಂತ್ರಿಸಲು ಇದೇ 20ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ’ ಎಂದು ಸ್ಥಳದಲ್ಲಿ ಬೀಡುಬಿಟ್ಟಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್ ಹಿಲೋರಿ ತಿಳಿಸಿದರು.

ಈ ಮಧ್ಯೆ, ಸಂಜೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.