ADVERTISEMENT

ಸಿ.ಎಂ ಮಗನ ವಿವಾದ: ವರದಿಗೆ ವರಿಷ್ಠರ ಸೂಚನೆ

ಇಂದು ಪರಮೇಶ್ವರ್ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2016, 19:30 IST
Last Updated 14 ಏಪ್ರಿಲ್ 2016, 19:30 IST
ಸಿ.ಎಂ ಮಗನ ವಿವಾದ: ವರದಿಗೆ ವರಿಷ್ಠರ ಸೂಚನೆ
ಸಿ.ಎಂ ಮಗನ ವಿವಾದ: ವರದಿಗೆ ವರಿಷ್ಠರ ಸೂಚನೆ   

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ನಿರ್ದೇಶಕರಾಗಿರುವ ‘ಮ್ಯಾಟ್ರಿಕ್‌ ಇಮೇಜಿಂಗ್‌ ಸೊಲ್ಯೂಷನ್ಸ್’ ಸಂಸ್ಥೆಗೆ ಬೆಂಗಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಗ್ನಾಸ್ಟಿಕ್‌ ಲ್ಯಾಬ್‌ (ರೋಗ ಪತ್ತೆ ಕೇಂದ್ರ) ಸ್ಥಾಪಿಸಲು ಗುತ್ತಿಗೆ ನೀಡಿರುವ ಬಗ್ಗೆ ಕೂಡಲೇ ವರದಿ ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದೆ.

ಸಿದ್ದರಾಮಯ್ಯನವರ ಪುತ್ರನ ಹಗರಣ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆಯುತ್ತಿದ್ದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಶುಕ್ರವಾರ ದೆಹಲಿಗೆ ಬರುವಂತೆ  ಅವರಿಗೆ ಸೂಚಿಸಿದ್ದಾರೆ.

ಪರಮೇಶ್ವರ್‌ ಅವರು ಸೋನಿಯಾ ಅವರನ್ನು ಭೇಟಿ ಮಾಡಿ ಡಾ. ಯತೀಂದ್ರ ಅವರು ನಿರ್ದೇಶಕರಾಗಿರುವ ಸಂಸ್ಥೆಗೆ ಡಯಾಗ್ನಾಸ್ಟಿಕ್‌ ಲ್ಯಾಬ್‌ ಸ್ಥಾಪಿಸಲು ಗುತ್ತಿಗೆ ನೀಡಿರುವ ಕುರಿತು  ವಿವರಿಸುವರೆಂದು ಎಐಸಿಸಿ ಮೂಲಗಳು ತಿಳಿಸಿವೆ.

ADVERTISEMENT

ಪರಮೇಶ್ವರ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಸಂಭವವಿದೆ. ಪಶ್ಚಿಮ ಬಂಗಾಳ, ತಮಿಳು ನಾಡು, ಕೇರಳ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಟೆಂಡರ್ ವಿವಾದ ಹೊರಬಂದಿರುವುದು ಪಕ್ಷದ ಹೈಕಮಾಂಡ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಇತ್ತೀಚೆಗೆ ಸಿ.ಎಂ ದುಬಾರಿ ಕೈಗಡಿಯಾರ ವಿವಾದದಿಂದ ಹೈಕಮಾಂಡ್‌ ಪೇಚಿಗೆ ಸಿಕ್ಕಿತ್ತು. ಅನಂತರ ಲೋಕಾಯುಕ್ತ ದುರ್ಬಲಗೊಳಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಕೊಳ್ಳಲಾಗದ ಸ್ಥಿತಿಗೆ ಹೈಕಮಾಂಡ್‌ ತಲುಪಿದೆ. ಇದರ ಹಿಂದೆಯೇ ಮುಖ್ಯಮಂತ್ರಿಗಳ ಮೇಲೆ ಸ್ವಜನ ಪಕ್ಷಪಾತದ ಆರೋಪ ಬಂದಿದೆ.

20ರಂದು ಸಿ.ಎಂ ದೆಹಲಿಗೆ? (ಬೆಂಗಳೂರು ವರದಿ): ಸಂಪುಟ ಪುನರ್‌ರಚನೆ ಬಗ್ಗೆ ಪಕ್ಷದ ವರಿಷ್ಠರಲ್ಲಿ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 20 ಅಥವಾ 21ರಂದು ನವದೆಹಲಿಗೆ ತೆರಳುವ ಸಾಧ್ಯತೆ ಇದೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ಶಾಸಕರಿಗೆ ಸಹಜವಾಗಿ ಸಂಪುಟ ಸೇರುವ ಆಸೆ ಇರುತ್ತದೆ. ಯಾರಿಗೂ ನಿರಾಸೆ ಮಾಡುವುದಿಲ್ಲ. ಏಪ್ರಿಲ್‌ ಅಂತ್ಯದಲ್ಲಿ ನಿಶ್ಚಿತವಾಗಿ ಸಂಪುಟ ಪುನರ್ ರಚನೆ ಮಾಡುತ್ತೇನೆ’ ಎಂದರು.

‘ಕಂಪೆನಿಗೆ ರಾಜೀನಾಮೆ ನೀಡುವುದಿಲ್ಲ’ (ಬೆಂಗಳೂರು ವರದಿ): ‘ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸೊಲ್ಯೂಷನ್ಸ್‌ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಡಯಾಗ್ನಾಸ್ಟಿಕ್‌ ಲ್ಯಾಬೋರೇಟರಿ (ರೋಗ ಪತ್ತೆ ಪ್ರಯೋಗಾಲಯ) ಸ್ಥಾಪನೆಗೆ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸೊಲ್ಯೂಷನ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಿದ ವಿಚಾರ ವಿವಾದ ಸೃಷ್ಟಿಯಾಗಿರುವ ಬಗ್ಗೆ ಅವರು ಗುರುವಾರ ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದರು.

‘ಸಚಿವರ ಅಪ್ತಾಪ್ತ ವಯಸ್ಸಿನ ಮಕ್ಕಳು, ಅವರನ್ನು ಅವಲಂಬಿಸಿರುವ ರಕ್ತಸಂಬಂಧಿಗಳು, ಅವರ ಪತ್ನಿ ಅಥವಾ ಪತಿಗೆ ಮಾತ್ರ  ನೀತಿ ಸಂಹಿತೆ ಅನ್ವಯವಾಗುತ್ತದೆ. ನಾನು ತಂದೆಯ ಜತೆಯಲ್ಲೇ ವಾಸವಾಗಿದ್ದರೂ ಅವರ ಮೇಲೆ ಅವಲಂಬಿತನಲ್ಲ. ಸ್ವತಂತ್ರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದೇನೆ. ಹಾಗಾಗಿ ನನಗೆ ನೀತಿ ಸಂಹಿತೆ  ಅನ್ವಯ ಆಗುವುದಿಲ್ಲ. ಲ್ಯಾಬೋರೇಟರಿ ಸ್ಥಾಪನೆಯ ಗುತ್ತಿಗೆಯನ್ನೂ ಕಾನೂನುಬದ್ಧವಾಗಿಯೇ ಪಡೆದಿದ್ದೇವೆ. ಇದರಲ್ಲೂ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ’  ಎಂದು ಅವರು ಸ್ಪಷ್ಟಪಡಿಸಿದರು.

‘ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡಲಾಗುತ್ತಿದೆ. ನಾನು ರಾಜೀನಾಮೆ ನೀಡಿದರೂ ತಪ್ಪು ಸಂದೇಶ ಹೋಗುತ್ತದೆ. ಈ ವಿಚಾರವನ್ನು ರಾಜಕೀಯಗೊಳಿಸುವುದು ನನಗೆ ಇಷ್ಟ ಇಲ್ಲ’ ಎಂದರು.

ಮುಜುಗರವಾಗಿದೆ ಎಂದ ಶ್ರೀನಿವಾಸಪ್ರಸಾದ್‌(ಮೈಸೂರು ವರದಿ): ಮತ್ತೊಂದೆಡೆ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಂಸ್ಥೆಗೆ ಬೆಂಗ ಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪಿಸಲು ಗುತ್ತಿಗೆ ನೀಡಿರುವ ಪ್ರಕರಣದಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಿದೆ’ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದದ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆಯೂ ಅವರೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.