ತುಮಕೂರು: ರಾಜ್ಯ ವಿಧಾನ ಮಂಡಲದ ಅಧಿವೇಶನ ಇದೇ 20 ರಂದು ಪ್ರಾರಂಭವಾಗಲಿದೆ. ಮರುದಿನ 21ರಂದು ಬಜೆಟ್ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಸದಾನಂದ ಗೌಡರು ತಮ್ಮ 59ನೇ ಹುಟ್ಟುಹಬ್ಬದ ಪ್ರಯುಕ್ತ ಸಿದ್ದಗಂಗಾ ಮಠದ ಅಧ್ಯಕ್ಷ ಡಾ.ಶಿವಕುಮಾರಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.
`ಅಧಿಕಾರ ಶಾಶ್ವತ ಅಲ್ಲ. ಜನಪರ ಕಾರ್ಯಕ್ರಮಗಳೇ ಶಾಶ್ವತ. ಅಧಿಕಾರದಲ್ಲಿದ್ದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ, ಎಂಥ ಕಾರ್ಯಕ್ರಮಗಳನ್ನು ರೂಪಿಸಿಕೊಡುತ್ತೇವೆ ಎಂಬುದನ್ನು ಮಾತ್ರ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ~ ಎಂದು ಸ್ವಾಮೀಜಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.
ಮುಖ್ಯಮಂತ್ರಿಯ ಯಾವ ಮಾತಿಗೂ ಸ್ವಾಮೀಜಿ ಮೌನ ಮುರಿಯಲಿಲ್ಲ. ಹೊರಡಲು ಎದ್ದು ನಿಂತ ಸಂದರ್ಭದಲ್ಲಿ `ಪ್ರಸಾದ ತಗೊಳ್ಳಿ~ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಶರಣಾದರು.
ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿವಿಎಸ್, ಬಜೆಟ್ ಸಿದ್ಧತೆ ಮುಗಿದಿದೆ. ಪ್ರತಿಗಳು ಮುದ್ರಣಕ್ಕೆ ಹೋಗಿವೆ. ಉತ್ತಮ ಬಜೆಟ್ ಮಂಡಿಸಲು ಶಕ್ತಿ ನೀಡುವಂತೆ ದೇವರನ್ನು ಮತ್ತು ಗುರುಗಳನ್ನು ಬೇಡಲು ಮಠಕ್ಕೆ ಬಂದಿದ್ದೆ ಎಂದು ನುಡಿದರು.
ಯಡಿಯೂರಪ್ಪ ಅವರ ಈಚಿನ ವರ್ತನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಡಿವಿಎಸ್ ನಿರಾಕರಿಸಿದರು. ಬೆಂಬಲಿಗರು ತಮ್ಮ ನಾಯಕನನ್ನು ಕರೆದು ಸನ್ಮಾನಿಸುವುದು ರಾಜಕೀಯದಲ್ಲಿ ಸಾಮಾನ್ಯ ಸಂಗತಿ. ಇದನ್ನು ಇನ್ಯಾವುದಕ್ಕೋ ಹೋಲಿಸಿ ದೊಡ್ಡ ವಿಷಯ ಮಾಡುವುದು ಬೇಡ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.