ADVERTISEMENT

ಸಿದ್ದರಾಮಯ್ಯ–ಪರಮೇಶ್ವರ ಮಧ್ಯೆ ಮನಸ್ತಾಪ ಇಲ್ಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಸಿದ್ದರಾಮಯ್ಯ–ಪರಮೇಶ್ವರ ಮಧ್ಯೆ ಮನಸ್ತಾಪ ಇಲ್ಲ
ಸಿದ್ದರಾಮಯ್ಯ–ಪರಮೇಶ್ವರ ಮಧ್ಯೆ ಮನಸ್ತಾಪ ಇಲ್ಲ   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮಧ್ಯೆ ಯಾವುದೇಮನಸ್ತಾಪ ಇಲ್ಲ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದರು.

ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ವಿವಿಧ ಘಟಕಗಳ ಪ್ರಮುಖರ ಜೊತೆ ಎರಡು ದಿನ ಸರಣಿ ಸಭೆ ನಡೆಸಲು ಮಂಗಳವಾರ ನಗರಕ್ಕೆ ಬಂದಿರುವ ವೇಣುಗೋಪಾಲ್‌, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ‘ಪಕ್ಷ ಅಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳು ಸಾಮಾನ್ಯ’ ಎಂದರು.

‘ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಮುಖ್ಯಮಂತ್ರಿ ಕೈಗೊಳ್ಳಲಿರುವ ಯಾತ್ರೆಯಲ್ಲಿ ಪರಮೇಶ್ವರ ಭಾಗವಹಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ADVERTISEMENT

‘ಸಂಸದ ಪ್ರತಾಪ ಸಿಂಹ ವಿಡಿಯೋ ನಾನೂ ನೋಡಿದ್ದೇನೆ. ಕಾನೂನು ಸುವ್ಯವಸ್ಥೆ ಹದಗೆಡಿಸಿ ಅಶಾಂತಿ ಉಂಟು ಮಾಡುವುದೇ ಅವರ ಸಿದ್ಧಾಂತ. ರಾಷ್ಟ್ರೀಯ ಅಧ್ಯಕ್ಷರೇ ಆ ರೀತಿ ಪ್ರಚೋದಿಸುತ್ತಾರೆ ಅಂದರೆ ಏನು ಅರ್ಥ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಮುಂದಾಗಿದೆ’ ಎಂದು ದೂರಿದರು.

‘ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲು ವಿಷಯಗಳಿಲ್ಲ. ಹೀಗಾಗಿ, ಕೋಮುಭಾವನೆ ಕೆರಳಿಸಲು ಯತ್ನಿಸುತ್ತಿದ್ದಾರೆ. ಕೆಲವು ವಿಚಾರಗಳನ್ನು ಗುರಿ ಮಾಡಿಕೊಂಡು ಬಿಜೆಪಿ ನಾಯಕರು ರಸ್ತೆಗಿಳಿಯುತ್ತಿದ್ದಾರೆ’ ಎಂದು ಟೀಕಿಸಿದರು.

ಕೇರಳದ ಸೋಲಾರ್‌ ಹಗರಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘40 ವರ್ಷದ ರಾಜಕಾರಣದಲ್ಲಿ ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಕೇರಳದಲ್ಲಿ ಸಿಪಿಎಂ ಸರ್ಕಾರ ಅಧಿಕಾರದಲ್ಲಿದೆ. ಯಾವುದೇ ತನಿಖೆ ನಡೆಸಲಿ, ಎದುರಿಸಲು ಸಿದ್ಧ’ ಎಂದು ಸವಾಲು ಹಾಕಿದರು.

ಯುವ ಕಾಂಗ್ರೆಸ್‌ ಮುಖಂಡರಿಗೆ ಎಚ್ಚರಿಕೆ: ಮೊದಲು ಯೂತ್‌ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ವೇಣುಗೋಪಾಲ್, ಯುವ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ‘ಚುನಾವಣೆಗೆ ಕೆಲವು ತಿಂಗಳಷ್ಟೆ ಉಳಿದಿದೆ. ವಿರೋಧ ಪಕ್ಷಗಳ ವಿರುದ್ಧ ನೀವು ಎಷ್ಟು ಪ್ರತಿಭಟನೆ, ಹೋರಾಟ ಮಾಡಿದ್ದೀರಿ’ ಎಂದು ಅವರು ಪ್ರಶ್ನಿಸಿದರು.

‘ವಿರೋಧ ಪಕ್ಷಗಳ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುವಂತೆ ಕಳೆದ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಆದರೆ, ಬೆರಳಣಿಕೆಯಷ್ಟು ಮಾತ್ರ ಮಾಡಿದ್ದೀರಿ. ಎಲ್ಲ ಬೆಳವಣಿಗೆಗಳ ಬಗ್ಗೆ ನನಗೆ ಮಾಹಿತಿ ಬರುತ್ತದೆ. ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಮಹಿಳೆಯರಿಗೆ ಪ್ರಾತಿನಿಧ್ಯ’

‘ಪಕ್ಷ ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ. ಕನಿಷ್ಠ 35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ ತಿಳಿಸಿದರು.

‘ನಾನೂ ಈ ಬಾರಿ ಚುನಾವಣೆಯಲ್ಲಿ ನಿಲ್ಲುತ್ತಿದ್ದೇನೆ. ಮಹಿಳೆಯರ ಬಗ್ಗೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ವಿಶೇಷ ಕಾಳಜಿ ಹೊಂದಿದ್ದಾರೆ’ ಎಂದರು.

‘ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇದೆ. ಟಿಕೆಟ್ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸವೂ ಇದೆ’ ಎಂದು ಮೋಟಮ್ಮ ಹೇಳಿದರು.

ಮಾರ್ಚ್‌ನಲ್ಲಿ ಜನಾಶೀರ್ವಾದ ಯಾತ್ರೆ: ಸಿದ್ದರಾಮಯ್ಯ

ಬೆಂಗಳೂರು: ಈಗ ‘ಸಾಧನೆಯ ಸಂಭ್ರಮ’ ಕಾರ್ಯಕ್ರಮ ಮಾಡುತ್ತೇವೆಯೇ ಹೊರತು, ‘ಜನಾಶೀರ್ವಾದ ಯಾತ್ರೆ’ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಜನಾಶೀರ್ವಾದ ಯಾತ್ರೆ ಏನಿದ್ದರೂ ಮಾರ್ಚ್‌ನಲ್ಲಿ’ ಎಂದು ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಹೋಗುತ್ತಿದ್ದೇವೆ. ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾತ್ರ ಮಾಡುತ್ತೇವೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುತ್ತೇವೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 13 ರಿಂದ ಸಾಧನೆಯ ಸಂಭ್ರಮ ಆರಂಭಿಸಲಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.

ಅಮಿತ್‌ ಷಾ ವಿರುದ್ಧ ಪ್ರಕರಣ ದಾಖಲಿಸಬೇಕು: ಉಗ್ರಪ್ಪ

ಬೆಂಗಳೂರು: ಉಗ್ರ ಸ್ವರೂಪದ ಹೋರಾಟಕ್ಕೆ ಚಿತಾವಣೆ ನೀಡಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವಿರುದ್ಧ ‍ಪ್ರಕರಣ ದಾಖಲಿಸಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಷಾ ಸೂಚನೆ ಮೇರೆಗೆ ಉಗ್ರ ಹೋರಾಟ ನಡೆಸಿದ್ದೇವೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ. ಸ್ವತಃ ಕಾರು ಚಾಲನೆ ಮಾಡಿದ ಪ್ರತಾಪ ಸಿಂಹ, ಬ್ಯಾರಿಕೇಡ್ ಮೇಲೆ ಕಾರು ನುಗ್ಗಿಸಿದ್ದರಿಂದ ಮಹಿಳಾ ಎಎಸ್‌ಪಿಗೆ ಗಾಯವಾಗಿದೆ. ಈ ಕಾರಣಕ್ಕೆ ಸಿಂಹ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಬೇಕು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಒತ್ತಾಯಿಸಿದರು.

ಗುಜರಾತ್‌ ಮಾದರಿ ಎಂದರೆ ಅಭಿವೃದ್ಧಿ ಎಂದು ಹೇಳಲಾಗುತ್ತಿತ್ತು. ಹುಣಸೂರು ಘಟನೆ ಗಮನಿಸಿದರೆ ಬೆಂಕಿ ಹಚ್ಚುವುದು, ಕಾನೂನು ಭಂಗ ಮಾಡುವುದು, ವಿನಾಕಾರಣ ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಸಿಡಿಸುವಷ್ಟರ ಮಟ್ಟಿಗೆ ಹಿಂಸಾತ್ಮಕ ಹೋರಾಟ ನಡೆಸುವುದು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.