ADVERTISEMENT

ಸಿದ್ದರಾಮಯ್ಯ ಇರುವುದೇ ಜನರ ದುಡ್ಡು ಲೂಟಿ ಮಾಡಲು: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 10:02 IST
Last Updated 10 ಮಾರ್ಚ್ 2018, 10:02 IST
ತುಮಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ತುಮಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.   

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದೇ ಜನರ ದುಡ್ಡು ಲೂಟಿ ಮಾಡಲು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಕ್ ಬ್ಯಾಕ್ ವ್ಯವಹಾರದಲ್ಲಿ ಹೇಗೆ ಹಣ ಹೊಡೆಯಬೇಕು ಎಂಬುದರಲ್ಲಿ ಸಿದ್ದರಾಮಯ್ಯ ಅವರು ಪರಿಣಿತರು. ಅವರು ಇರುವುದೇ ಜನರ ದುಡ್ಡು ಲೂಟಿ ಮಾಡಲು. ಸರ್ಕಾರ ಎಷ್ಟು ಅರ್ಥಿಕ ದಿವಾಳಿಯಾಗಿದೆ ಎಂಬುದಕ್ಕೆ ಅಂಕಿ ಅಂಶಗಳಿವೆ. ಬಿಸಿನೆಸ್ ಲೈನ್ ಇಂಗ್ಲಿಷ್ ಪತ್ರಿಕೆ ಈ ಕುರಿತು ವರದಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ. ಹೀಗಾಗಿ ಹೋಗುವಾಗ ಆರ್ಥಿಕ ದಿವಾಳಿ ಮಾಡಿ ಹೋಗುತ್ತಿದ್ದಾರೆ ಎಂದು ಅರೋಪಿಸಿದರು.

ಸಿದ್ದರಾಮಯ್ಯ ಅವರಿಗೆ ಡೀಲ್ ಪಾಠ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮೈಸೂರಿನಲ್ಲಿ ಮುಖ್ಯಮಂತ್ರಿ ಹೇಳಿರುವ ಮಾತಿಗೆ ನನ್ನ ಸಹಮತವಿದೆ. ಮುಖ್ಯಮಂತ್ರಿಯವರಿಗೆ ಅಧಿಕಾರಿಗಳ ಜತೆಗೆ ಹೇಗೆ ಡೀಲ್ ಮಾಡಿ ವ್ಯವಹಾರ ಕುದುರಿಸಬೇಕು ಎಂಬುದು ಕರಗತವಾಗಿದೆ ಎಂದೂ ಕುಮಾರಸ್ವಾಮಿ ಹೇಳಿದರು.

ADVERTISEMENT

ಅಧಿಕಾರ ಮತ್ತು ದುಡ್ಡಿನ ಮದ ಸಿದ್ದರಾಮಯ್ಯ ಈ ರೀತಿ ಅಹಂಕಾರದ ಮಾತುಗಳನ್ನಾಡಲು ಕಾರಣವಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದರು.

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೇ ಲಂಚ ತೆಗೆದುಕೊಳ್ಳುವುದು ತಪ್ಪಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ನಾವು ದುಡ್ಡು ಹೊಡೆಯುವುದನ್ನು ಚೆನ್ನಾಗಿ ಕಲಿತಿದ್ದೇವೆ. ನೀವೂ ಕಲಿಯಿರಿ ಎಂದು ಆಡಳಿತ ವರ್ಗಕ್ಕೆ ಪಾಠ ಮಾಡಿದ್ದರು ಎಂದು ಹೇಳಿದರು.

ಈಗ ಸರ್ಕಾರ ಆರ್ಥಿಕ ದಿವಾಳಿ ಆಗಿರುವುದರಿಂದ ವೃದ್ಧಾಪ್ಯ, ವಿಧವಾ ವೇತನ ನಿಲ್ಲಿಸಿದ್ದಾರೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯಾವ ಯೋಜನೆಗಳೂ ಜಾರಿಗೆ ಬರುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇ ಬರುವುದಿಲ್ಲ. ಶೇ. ನೂರಕ್ಕೆ ನೂರು  ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.