ADVERTISEMENT

ಸುಬ್ರಹ್ಮಣ್ಯ: ಇಂದಿನಿಂದ ಮಡೆಸ್ನಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆಸ್ನಾನದಲ್ಲಿ ರೂಪಾಂತರ ಮಾಡುವಂತೆ ಸೂಚಿಸಿದ್ದ ರಾಜ್ಯ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಡೆಯಾಜ್ಞೆ ನೀಡಿರುವುದರಿಂದ ಚಂಪಾ ಷಷ್ಠಿಯ ಪ್ರಯುಕ್ತ ಭಾನುವಾರದಿಂದ ಮಂಗಳವಾರದವರೆಗೆ (ಚೌತಿ, ಪಂಚಮಿ, ಷಷ್ಠಿ) ದೇವಸ್ಥಾನದ ಹೊರಾಂಗಣದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದ ರೀತಿಯಲ್ಲಿ ಮಡೆಸ್ನಾನ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

`ಮಡೆಸ್ನಾನದ ಬದಲಿಗೆ ಹೈಕೋರ್ಟ್ ಸೂಚಿಸಿದಂತೆ ಎಡೆಸ್ನಾನ ನಡೆಸಲು ಸಹ ನಾವು ಸಜ್ಜಾಗಿದ್ದೆವು. ಆದರೆ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಈ ಮೊದಲಿನ ಕ್ರಮವನ್ನೇ ನಾವು ಅನುಸರಿಸಲಿದ್ದೇವೆ' ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಶನಿವಾರ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಮುಜರಾಯಿ ಇಲಾಖೆ ಮೂಲಕ ದೇವಸ್ಥಾನದ ಕಚೇರಿಗೆ ತಲುಪಿದೆ. ಮೇಲಧಿಕಾರಿಗಳ ಸೂಚನೆಯಂತೆ ಮಡೆಸ್ನಾನ ಯಥಾಪ್ರಕಾರ ಮುಂದುವರಿಯಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಕಾಳಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ನ ತೀರ್ಪು ಸ್ವಾಗತಾರ್ಹ, ಆದರೆ ಪಂಕ್ತಿ ಭೇದ ನಿಷೇಧಕ್ಕಾಗಿ ಮಡೆಸ್ನಾನದ ದುರ್ಬಳಕೆ ಮಾಡುವುದು ಸಲ್ಲದು ಎಂದು ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಭಾಸ್ಕರ ಬೆಂಡೋಡಿ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.