ADVERTISEMENT

ಸುಮಲತಾ ಜೊತೆ ಊಟ ಮಾಡುವುದು ತಪ್ಪಾ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಮೇ 2019, 12:36 IST
Last Updated 2 ಮೇ 2019, 12:36 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಮಂಡ್ಯ: ‘ಜಿಲ್ಲೆಯ ಕೆಲವು ಗೆಳೆಯರು ಹಾಗೂ ರಾಜಕೀಯ ಮುಖಂಡರೊಂದಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ ಊಟಕ್ಕೆ ತೆರಳಿದ್ದಾಗ ಅಲ್ಲಿಗೆ ಸುಮಲತಾ ಬಂದರು. ಪರಸ್ಪರ ಪ್ರೀತಿಯಿಂದ ಮಾತನಾಡಿ ಜೊತೆಯಲ್ಲಿ ಊಟ ಮಾಡಿದೆವು. ಅವರ ಜೊತೆ ಊಟ ಮಾಡುವುದು ತಪ್ಪಾ’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಗುರುವಾರ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಚುನಾವಣೆ ಮುಗಿದ ನಂತರ ಸುಮಲತಾ ಅವರನ್ನು ಅನಿರೀಕ್ಷಿತವಾಗಿ ಎರಡು, ಮೂರು ಬಾರಿ ಭೇಟಿ ಮಾಡಿದ್ದೇನೆ. ಪ್ರೀತಿಯಿಂದ ಮಾತನಾಡಿಸಿದ್ದಾರೆ. ಅಂತೆಯೇ ಏಟ್ರಿಯಾ ಹೋಟೆಲ್‌ನಲ್ಲೂ ಭೇಟಿಯಾದೆವು. ಅದರಲ್ಲಿ ರಾಜಕೀಯ ಹುಡುಕುವುದರಲ್ಲಿ ಅರ್ಥವಿಲ್ಲ. ಚುನಾವಣೆ ಮುಗಿದಿದೆ, ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ. ಆ ಕುರಿತು ಮಾತನಾಡಲು ಏನೂ ಉಳಿದಿಲ್ಲ. ಖಾಸಗಿ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುವವರಿಗೆ ಸಾಮಾನ್ಯ ಜ್ಞಾನವಿಲ್ಲ’ ಎಂದು ಆರೋಪಿಸಿದರು.

‘ಚುನಾವಣೆ ಸಂದರ್ಭದಲ್ಲಿ ನಾವು ಸುಮಲತಾ ಅವರನ್ನು ಎಂದೂ ಭೇಟಿ ಮಾಡಿಲ್ಲ, ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಅವರಿಂದ ಅಂತರ ಕಾಯ್ದುಕೊಂಡಿದ್ದೆವು. ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಪಾಲನೆ ಮಾಡಿದ್ದೇವೆ. ಹೋಟೆಲ್‌ನಲ್ಲಿ ರಹಸ್ಯವಾಗಿ ನಾವು ಚರ್ಚೆ ಮಾಡಿಲ್ಲ. ಆಕಸ್ಮಿಕ ಭೇಟಿಯ ವೇಳೆ ಊಟ ಮಾಡಿದ್ದೇವೆ, ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ADVERTISEMENT

ಶಿಖಂಡಿ ರಾಜಕಾರಣ: ಸುರೇಶ್‌ಗೌಡ
‘ಕೆಲವರು ಹೆಂಗಸರನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ವಿರುದ್ಧ ಕೆಲಸ ಮಾಡಿದ್ದಾರೆ’ ಎಂದು ನಾಗಮಂಗಲದಲ್ಲಿ ಶಾಸಕ ಸುರೇಶ್‌ಗೌಡ ವಾಗ್ದಾಳಿ ನಡೆಸಿದರು.

‘ಮೂಲ ಕಾಂಗ್ರೆಸ್ಸಿಗರು ಮೈತ್ರಿಧರ್ಮ ಪಾಲನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ವಲಸೆ ಹೋದ ಮುಖಂಡರು ಆ ಪಕ್ಷದ ಸಿದ್ಧಾಂತ ಅರಿಯದೇ ಬ್ಲಾಕ್‌ಮೇಲ್‌ ರಾಜಕಾರಣ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ. ಇವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಿ ಬಿಜೆಪಿ ಹುಟ್ಟಿಗೆ ಕಾರಣಕರ್ತರಾಗುತ್ತಿದ್ದಾರೆ’ ಎಂದರು.

ಚಲುವರಾಯಸ್ವಾಮಿ– ಸುಮಲತಾ ಭೇಟಿಯ ವಿಡಿಯೊ ಕುರಿತು ಮಾತನಾಡಿದ ಅವರು ‘ಅವನ್ಯಾವ ದೊಡ್ಡ ವ್ಯಕ್ತಿ ಎಂದು ಆತನ ವಿರುದ್ಧ ಗೂಢಾಚಾರಿಕೆ ಮಾಡಲು ಹೋಗುತ್ತಾರೆ. ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ನೋಡಿಕೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.