ADVERTISEMENT

ಸೂಚನಾ ಪತ್ರ ಹಿಂಪಡೆಯಲು ಲಿಂಬಾವಳಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಬಿ.ಜೆ.ಪುಟ್ಟಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಅವರ ಸೂಚನಾ ಪತ್ರಕ್ಕೆ ಸಹಿ ಮಾಡಿರುವ ಶಾಸಕ ಅರವಿಂದ ಲಿಂಬಾವಳಿ ಅದನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಮುಂದೆ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದಾರೆ.

ಈ ಮೂಲಕ ಪುಟ್ಟಸ್ವಾಮಿ ಅವರ ನಾಮಪತ್ರ ಸಿಂಧು ಆಗುತ್ತದೊ ಇಲ್ಲವೊ ಎಂಬುದು ಕುತೂಹಲ ಮೂಡಿಸಿದ್ದು, ಲಿಂಬಾವಳಿ ಎತ್ತಿರುವ ತಕರಾರಿಗೆ ಪುಟ್ಟಸ್ವಾಮಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೌಖಿಕವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಅದನ್ನು ಲಿಖಿತ ರೂಪದಲ್ಲಿ ನೀಡುವಂತೆ ಇಬ್ಬರಿಗೂ ಓಂಪ್ರಕಾಶ್ ಸೂಚಿಸಿದ್ದಾರೆ.
 
ಬುಧವಾರ ಮಧ್ಯಾಹ್ನ 2.30ಕ್ಕೆ ಮತ್ತೆ ಈ ಕುರಿತು ವಿಚಾರಣೆ ನಡೆಯಲಿದ್ದು, ಎರಡೂ ಕಡೆಯವರ ಅಹವಾಲುಗಳನ್ನು ಆಲಿಸಲಿದ್ದಾರೆ. `ಬಿಜೆಪಿಯ ಅಧಿಕೃತ ಅಭ್ಯರ್ಥಿಯೆಂದು ತಿಳಿದು ಪುಟ್ಟಸ್ವಾಮಿಯ ಸೂಚನಾ ಪತ್ರಕ್ಕೆ ಸಹಿ ಮಾಡಲಾಯಿತು. ಆದರೆ, ತದನಂತರ ಅವರು ಬಂಡಾಯ ಅಭ್ಯರ್ಥಿ ಎಂಬುದು ಗೊತ್ತಾಯಿತು. ಹೀಗಾಗಿ ಸೂಚನಾ ಪತ್ರಕ್ಕೆ ಮಾಡಿದ್ದ ಸಹಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ~ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಲಿಂಬಾವಳಿ ತಿಳಿಸಿದ್ದಾರೆ.

ಈ ನಡುವೆ ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪುಟ್ಟಸ್ವಾಮಿ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಪುಟ್ಟಸ್ವಾಮಿ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, ಆ ಹುದ್ದೆಗೆ ರಾಜೀನಾಮೆ ನೀಡದೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ಸರಿಯಲ್ಲ ಎಂಬುದು ಅವರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.