ADVERTISEMENT

ಸೋಮವಾರ ಹೊಳಲ್ಕೆರೆ ಸಂಪೂರ್ಣ ಬಂದ್: ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 26 ಮೇ 2018, 14:14 IST
Last Updated 26 ಮೇ 2018, 14:14 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಹೊಳಲ್ಕೆರೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಮೇ 28ರಂದು ತಾಲ್ಲೂಕಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆದ 24 ಗಂಟೆಗಳ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಈಗ ಯೂಟರ್ನ್ ಮಾಡಿದ್ದಾರೆ. ಮಾಸಿಕ ₹6,500 ವೃದ್ಧಾಪ್ಯ ವೇತನ, ಗರ್ಭಿಣಿ, ಬಾಣಂತಿಯರಿಗೆ ತಿಂಗಳಿಗೆ ₹6,000 ಪ್ರೋತ್ಸಾಹಧನ, ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ₹2,000 ಎಂಬ ಆಮಿಷಗಳನ್ನು ನೀಡಿ ಮತ ಪಡೆದ ಕುಮಾರಸ್ವಾಮಿ ಈಗ ಮಾತಿಗೆ ತಪ್ಪುತ್ತಿದ್ದಾರೆ’ ಎಂದು ದೂರಿದರು.

24 ಗಂಟೆಗಳ ಒಳಗೆ ಸಾಲ ಮನ್ನಾ ಮಾಡುತ್ತೇನೆ ಎಂದ ಸಿಎಂ 72 ಗಂಟೆ ಆದರೂ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಅವರಿಗೆ ಇನ್ನೂ 24 ಗಂಟೆ ಕಾಲಾವಕಾಶ ಇದ್ದು, ಸಾಲ ಮನ್ನಾ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.

ADVERTISEMENT

ಬಿಜೆಪಿ ರೈತಪರವಾಗಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ 24 ಗಂಟೆಗಳ ಒಳಗೆ ರೈತರ ₹1 ಲಕ್ಷ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಎಂದಿಗೂ ರೈತರ ಪರವಾಗಿರುತ್ತದೆ. ಬಂದ್‌ಗೆ ರೈತರು, ವರ್ತಕರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.