ಹಾವೇರಿ: ಏತ ನೀರಾವರಿ ಯೋಜನೆಯ ನೀರನ್ನು ಜಮೀನಿಗೆ ಹರಿಸಲು ತುಂತುರು (ಸ್ಪ್ರಿಂಕ್ಲರ್) ನೀರಾವರಿ ಸೌಲಭ್ಯ ಕಲ್ಪಿಸುವ ವಿನೂತನ ಯೋಜನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಅನುಷ್ಠಾನವಾಗಿದ್ದು ಇದೇ 9 ರಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನಾಡಿಗೆ ಸಮರ್ಪಿಸಲಿದ್ದಾರೆ.
ಸಾಮಾನ್ಯವಾಗಿ ಏತ ನೀರಾವರಿ ಯೋಜನೆಯಲ್ಲಿ ನದಿ ಅಥವಾ ಕಾಲುವೆಗಳಿಂದ ನೀರನ್ನು ಕಾಲುವೆಗಳ ಮೂಲಕ ನೇರವಾಗಿ ಜಮೀನಿಗೆ ಹರಿಸಲಾಗುತ್ತದೆ. ಈ ವಿನೂತನ ಯೋಜನೆಯ ವಿಶೇಷವೆಂದರೆ ಕಾಲುವೆ ಮೂಲಕ ನೀರನ್ನು ಪೂರೈಕೆ ಮಾಡದೇ ತೊಟ್ಟಿಗಳಲ್ಲಿ ಸಂಗ್ರಹಿಸಿ ನಂತರ ಅಗತ್ಯಕ್ಕೆ ತಕ್ಕಂತೆ ತುಂತುರು ನೀರಾವರಿ ಮೂಲಕ ಜಮೀನಿಗೆ ಒದಗಿಸಲಾಗುತ್ತದೆ.
ಯೋಜನೆ ಅನುಷ್ಠಾನದಿಂದ ಅನಗತ್ಯ ನೀರು ಪೋಲಾಗುವುದನ್ನು ತಡೆದು, ಬೆಳೆಗಳಿಗೆ ಅಗತ್ಯವಿರುವಷ್ಟು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಜತೆಗೆ ಜಮೀನು ಜವಳು ಆಗುವುದನ್ನು ಕೂಡ ತಡೆಯಬಹುದು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ್ದಾರೆ.
ವರದಾ ಹಾಗೂ ಧರ್ಮಾ ನದಿ ಸಂಗಮದ ಸ್ಥಳವಾದ ಸವಣೂರು ತಾಲ್ಲೂಕಿನ ಹಲಸೂರು ಬಳಿ ಜಾಕವೆಲ್, ಅದಕ್ಕೆ ಹೊಂದಿಕೊಂಡು 180 ಮೀಟರ್ ಉದ್ದದ ಕಾಲುವೆ, ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 11,600 ಕಿ.ಮೀ ಉದ್ದದ ಪೈಪ್‌ಗಳು, ಆರು ಬೃಹತ್ ತೊಟ್ಟಿಗಳು ಹಾಗೂ 85 ಎಕರೆಗೆ ಒಂದರಂತೆ ಒಟ್ಟು 119 ಸಂಪ್‌ಗಳನ್ನು (ಸಣ್ಣ ಸಣ್ಣ ತೊಟ್ಟಿಗಳು) ನಿರ್ಮಿಸಲಾಗಿದೆ. ನದಿಯಿಂದ 10,616 ಎಚ್.ಪಿ. ಸಾಮರ್ಥ್ಯದ ನಾಲ್ಕು ಪಂಪ್‌ಗಳ ಮೂಲಕ ನೀರನ್ನು ಮೇಲೆತ್ತಿ ಕಾಲುವೆ ಮತ್ತು ಪೈಪ್‌ಗಳ ಮೂಲಕ ಬೃಹತ್ ತೊಟ್ಟಿಗಳಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ನೀರನ್ನು ಸಣ್ಣ ಸಣ್ಣ ತೊಟ್ಟಿಗಳಿಗೆ ಹರಿಸಿ, ಸಂಗ್ರಹಿಸಲಾಗುತ್ತದೆ. ತದನಂತರದಲ್ಲಿ 10 ಅಶ್ವಶಕ್ತಿಯ 2-3 ಪಂಪ್‌ಸೆಟ್‌ಗಳನ್ನು ಬಳಸಿ ತುಂತುರು ನೀರಾವರಿ ಕೊಳವೆ ಮಾರ್ಗದ ಮೂಲಕ ಜಮೀನಿಗೆ ನೀರುಣಿಸಲಾಗುತ್ತದೆ.
ಅದೇ ರೀತಿ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಶಿಗ್ಗಾವಿ ತಾಲ್ಲೂಕಿನ ಹಳೇ ಬಂಕಾಪುರ, ಶಿಡ್ಲಾಪುರ, ಕಲ್ಯಾಣ, ನಿಡಗುಂದಿ ಹಾಗೂ ಹಾನಗಲ್ ತಾಲ್ಲೂಕಿನ ನೀರಲಗಿ ಕೆರೆಗಳನ್ನೂ ತುಂಬಿಸಲಾಗುತ್ತದೆ. ಇದರಿಂದ ಎರಡು ತಾಲ್ಲೂಕುಗಳ ಮುಕ್ಕಾಲು ಭಾಗ ನೀರಾವರಿಗೆ ಒಳಪಡಲಿದೆ ಎಂದು ವಿವರಿಸುತ್ತಾರೆ ಸಹಾಯಕ ಎಂಜಿನಿಯರ್ ಬಟ್ಟೂರ.
ಈ ಯೋಜನೆಯ 1.50 ಟಿಎಂಸಿ ಅಡಿ ನೀರಿನ ಪೈಕಿ 1.35 ಟಿಎಂಸಿ ಅಡಿ ನೀರಾವರಿಗೆ ಬಳಕೆಯಾದರೆ, 0.15 ಟಿಎಂಸಿ ಡಿ ಕೆರೆ ತುಂಬಿಸಲು ಬಳಕೆಯಾಗಲಿದೆ. ಮೊದಲ ನೀರು ಸಂಗ್ರಹ ತೊಟ್ಟಿಯಿಂದ 667 ಹೆಕ್ಟೇರ್‌ಗೆ, ಎರಡನೆ- 257 ಹೆಕ್ಟೇರ್‌ಗೆ, ಮೂರನೆ- 1,572 ಹೆಕ್ಟೇರ್‌ಗೆ, ನಾಲ್ಕನೆ- 392 ಹೆಕ್ಟೇರ್‌ಗೆ, ಐದನೆ- 2,990 ಹೆಕ್ಟೇರ್ ಹಾಗೂ ಆರನೆಯ ತೊಟ್ಟಿಯಿಂದ 4,022 ಹೆಕ್ಟೇರ್ ಜಮೀನಿಗೆ ನೀರು ಪೂರೈಕೆಯಾಗಲಿದೆ ಎಂದು ಅವರು ಹೇಳಿದರು.
`ಯಾವುದೇ ನೀರಾವರಿ ಸೌಲಭ್ಯವಿಲ್ಲದ ಸವಣೂರು ಮತ್ತು ಶಿಗ್ಗಾವಿ ತಾಲ್ಲೂಕುಗಳಲ್ಲಿ ವರದಾ ಮತ್ತು ಧರ್ಮಾ ನದಿ ನೀರನ್ನು ಬಳಕೆ ಮಾಡಿಕೊಳ್ಳಲು ಈ ವಿನೂತನ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಇದು ಎರಡೂ ತಾಲ್ಲೂಕುಗಳ ರೈತರ ಪಾಲಿಗೆ ದೊಡ್ಡ ವರದಾನವಾಗಲಿದೆ~ ಎನ್ನುತ್ತಾರೆ ಬಸವರಾಜ ಬೊಮ್ಮಾಯಿ.
ರೂ 238 ಕೋಟಿ ವೆಚ್ಚ
ದೇಶದಲ್ಲಿಯೇ ಪ್ರಪ್ರಥಮವಾದ ಈ ಯೋಜನೆಯಿಂದ ಶಿಗ್ಗಾವಿ, ಸವಣೂರು, ಹಾನಗಲ್ ತಾಲ್ಲೂಕುಗಳ ಒಟ್ಟು 30 ಗ್ರಾಮಗಳ 24,463 ಎಕರೆಗೆ ನೀರುಣಿಸಲು ಸರ್ಕಾರ ರೂ 238 ಕೋಟಿ ವಿನಿಯೋಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.