ADVERTISEMENT

ಹಣ ಬಿಡುಗಡೆ ಮಾಡದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST

ಬೆಂಗಳೂರು: ರಾಜ್ಯ ಸರ್ಕಾರದಿಂದ ಎಷ್ಟೇ ಒತ್ತಡ ಬಂದರೂ ರಾಮನಗರ ಕ್ಯಾಂಪಸ್‌ನಲ್ಲಿ ವೈದ್ಯ ಕಾಲೇಜ್‌, ದಂತ ವೈದ್ಯ ಕಾಲೇಜ್‌ ಮತ್ತು ಅತ್ಯಾಧು
ನಿಕ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಬಾರದು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿ
ಕೇಟ್‌ ಸಭೆ ಶುಕ್ರವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಹಂಗಾಮಿ ಕುಲಪತಿ ಡಾ. ಎಂ.ಕೆ. ರಮೇಶ್‌ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಿಂಡಿಕೇಟ್‌ ಸಭೆ ವಿಶ್ವವಿದ್ಯಾಲಯ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ
₹ 33ಕೋಟಿ ನೀಡಲು ಒಪ್ಪಿದೆ. ಆದರೆ,  ವ್ಯಾಜ್ಯರಹಿತ ಜಮೀನು ಕೊಟ್ಟರೆ ಮಾತ್ರ ರಾಜ್ಯಪಾಲರ ಅನುಮತಿ ಪಡೆದು ಹಣ ಬಿಡುಗಡೆ ಮಾಡಬೇಕು. ಆಡಳಿತ ಕಚೇರಿ ವಿನ್ಯಾಸ ವಿವಿ ಎಂಜಿನಿಯರ್‌ ವಿಭಾಗದ ಕೊಡುವ ನಕ್ಷೆಯಂತೆ ಇರಬೇಕು ಎಂಬ ಷರತ್ತು ವಿಧಿಸಿದೆ.

ಸದ್ಯ, ವಿ.ವಿ ಖಾತೆಯಲ್ಲಿ ₹ 1,100 ಕೋಟಿ ಇದೆ. ಅದರಲ್ಲಿ ಆಸ್ಪತ್ರೆ ಹಾಗೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ₹ 580 ಕೋಟಿ ಬಿಡುಗಡೆ ಮಾಡುವಂತೆ ಸೆಪ್ಟೆಂಬರ್‌ 27ರಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ‘ನನ್ನ ಅನುಮತಿ ಪಡೆಯದೆ ಹಣ ಕೊಡಬಾರದು’ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

ADVERTISEMENT

ವಿ.ವಿ ಖಾತೆಯಿಂದ ಹಣ ಬಿಡುಗಡೆ ಮಾಡುವುದಕ್ಕೆ ಕಾನೂನು ತೊಡಕಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕವನ್ನು ಕಟ್ಟಡ ಅಥವಾ ಮೂಲ
ಸೌಲಭ್ಯ ಅಭಿವೃದ್ಧಿಗೆ ಬಳಸುವಂತಿಲ್ಲ. ಈ ಸಂಬಂಧ ನ್ಯಾಯಾಲಯದ ಆದೇಶವೂ ಇದೆ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

ಕ್ಯಾಂಪಸ್‌ಗೆ ರಾಜ್ಯ ಸರ್ಕಾರ ರಾಮನಗರದಲ್ಲಿ 71 ಎಕರೆ ಜಮೀನು ನೀಡಿದೆ. ಇದರಲ್ಲಿ 16 ಎಕರೆ ವ್ಯಾಜ್ಯದಲ್ಲಿದೆ. ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ತರಾತುರಿ ತೋರಿದ್ದು, ವೈದ್ಯಕೀಯ, ಲೋಕೋಪಯೋಗಿ ಒಳಗೊಂಡಂತೆ ಕೆಲವು ಸಚಿವಾಲಯಗಳು ವಿ.ವಿ ಮೇಲೆ ಒತ್ತಡ ಹಾಕುತ್ತಿವೆ ಎಂದೂ ವಿವರಿಸಿವೆ.

ಕ್ಯಾಂಪಸ್‌ನಲ್ಲಿ ಕಾಲೇಜ್‌ ಹಾಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆಗೆ ಭರ್ಜರಿ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸುವ ಆಲೋಚನೆ ರಾಜ್ಯ ಸರ್ಕಾರಕ್ಕೆ ಇದೆ. ಈ ಕಾರಣಕ್ಕೆ ವಿಶ್ವವಿದ್ಯಾಲಯದ ಖಾತೆಯಿಂದ ಹಣ ಬಿಡುಗಡೆ ಮಾಡುವಂತೆ ನಿರಂತರ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ವಿ.ವಿ ಹಣ ವರ್ಗಾವಣೆಗೆ ತೊಡಕಿಲ್ಲ. ನ್ಯಾಯಾಲಯದಲ್ಲಿದ್ದ ವ್ಯಾಜ್ಯಗಳು ಇತ್ಯರ್ಥವಾಗಿವೆ. ಆದರೂ ಎ.ಬಿ.ವಿ.ಪಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. -ಶರಣ -ಪ್ರಕಾಶ ಪಾಟೀಲ
ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.