ADVERTISEMENT

ಹದಿನೈದು ದಿನಗಳ ಹಿಂದೆಯೇ ಜೀವಬೆದರಿಕೆ ಹಾಕಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ   

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿಂದ ಇರಿದಿರುವ ಆರೋಪಿ ತೇಜ್‌ರಾಜ್ ಶರ್ಮಾ (32), 15 ದಿನಗಳ ಹಿಂದೆಯೇ ಜೀವಬೆದರಿಕೆ ಹಾಕಿದ್ದ ಎಂಬ ಸಂಗತಿ ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.

ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಶುಕ್ರವಾರವೂ ಆತನ ವಿಚಾರಣೆ ನಡೆಸಿದರು. ಈಗಾಗಲೇ ಆತ ತಪ್ಪೊಪ್ಪಿಕೊಂಡಿರುವುದರಿಂದ, ಬೇರೆ ಯಾವುದೇ ಮಾಹಿತಿ ವಿಚಾರಣೆಯಲ್ಲಿ ಲಭ್ಯವಾಗಿಲ್ಲ. 

‘ತುಮಕೂರಿನ 15 ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ಆರೋಪಿ, 15 ದಿನಗಳಿಗೊಮ್ಮೆ ಲೋಕಾಯುಕ್ತ ಕಚೇರಿಗೆ ಬಂದು ಹೋಗುತ್ತಿದ್ದ. ದೂರುಗಳು ರದ್ದಾಗಿದ್ದರಿಂದ ಕೋಪಗೊಂಡಿದ್ದ ಆತ, ಕಚೇರಿಯ ಹಲವು ಅಧಿಕಾರಿಗಳನ್ನು ನಿಂದಿಸಿದ್ದ. ಅದಕ್ಕೆ ಅವರು, ‘ಲೋಕಾಯುಕ್ತರ ಕಡೆ ಹೋಗಿ ವಿಚಾರಿಸಿ’ ಎಂದಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಘಟನೆ ನಡೆಯುವುದಕ್ಕೂ 15 ದಿನಗಳ ಹಿಂದಷ್ಟೇ ಕಚೇರಿಗೆ ಬಂದಿದ್ದ ಆತ, ನೇರವಾಗಿ ಲೋಕಾಯುಕ್ತರ ಕೊಠಡಿಯೊಳಗೆ ನುಗ್ಗಿದ್ದ. ‘ನನಗೆ ಅನ್ಯಾಯವಾಗಿದೆ. ನಿಮ್ಮನ್ನು ನಾನು ಸುಮ್ಮನೇ ಬಿಡುವುದಿಲ್ಲ. ಆ ದೇವರು ಸಹ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಬೆದರಿಕೆ ಹಾಕಿದ್ದ. ಸ್ಥಳದಲ್ಲಿದ್ದ ಲೋಕಾಯುಕ್ತರ ಗನ್‌ಮ್ಯಾನ್‌, ತೇಜ್‌ರಾಜ್‌ನನ್ನು ಹೊರಗೆ ಕಳುಹಿಸಿದ್ದರು. ಇದನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ. ಬೆದರಿಕೆಯನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.

ಆರೋಗ್ಯದ ಮಾಹಿತಿ ಪಡೆದ ಸಿಸಿಬಿ: ಸಿಸಿಬಿಯ ಡಿಸಿಪಿ ಜೀನೇಂದ್ರ ಕಣಗಾವಿ ನೇತೃತ್ವದ ತಂಡವು ಮಲ್ಯ ಆಸ್ಪತ್ರೆಗೆ ಶುಕ್ರವಾರ ಸಂಜೆ ಭೇಟಿ ನೀಡಿತು.

ವಿಶ್ವನಾಥ್‌ ಶೆಟ್ಟಿ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.