ADVERTISEMENT

ಹಳಿ ಏರಿ ಹೊಸ ರೈಲು ಬಂದೀತೆ?

ಎಂ.ನಾಗರಾಜ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST
ಹಳಿ ಏರಿ ಹೊಸ ರೈಲು ಬಂದೀತೆ?
ಹಳಿ ಏರಿ ಹೊಸ ರೈಲು ಬಂದೀತೆ?   

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಜನತೆ ತಮ್ಮ ದಿನ ನಿತ್ಯದ ಓಡಾಟಕ್ಕೆ ಹೆಚ್ಚಾಗಿ ರೈಲನ್ನೇ ಅವಲಂಬಿಸಿದ್ದಾರೆ. ಜತೆಗೆ `ಛೋಟಾ ಮುಂಬೈ' ಎಂದೇ ಖ್ಯಾತಿ ಗಳಿಸಿರುವ ಹುಬ್ಬಳ್ಳಿಗೆ ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿದರೆ ಉತ್ತರ ಕರ್ನಾಟಕದ ಉಳಿದೆಲ್ಲಾ ಜಿಲ್ಲಾ ಕೇಂದ್ರಗಳಿಗೂ ನೇರ ರೈಲು ಸಂಪರ್ಕ ಇದೆ. ಆದರೆ, ಅಗತ್ಯ ಪ್ರಮಾಣದ ರೈಲುಗಳ ಓಡಾಟ ಇಲ್ಲದ್ದರಿಂದ ಈ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಕಡಿಮೆ ಪ್ರಯಾಣ ದರದಲ್ಲಿ ತಮ್ಮ ಹಳ್ಳಿ ಸೇರಿಕೊಳ್ಳಲು ಶ್ರಮಿಕ ವರ್ಗದವರು ಮತ್ತು ಬಡವರು ಹೆಚ್ಚಾಗಿ ಈ ಪ್ಯಾಸೆಂಜರ್ ರೈಲುಗಳನ್ನೇ ನೆಚ್ಚಿಕೊಂಡಿರುವುದರಿಂದ ಈ ಭಾಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಜತೆಯಲ್ಲಿ ಪ್ಯಾಸೆಂಜರ್ ರೈಲಿಗೂ ಬೇಡಿಕೆ ಹೆಚ್ಚು.  ಹೀಗಾಗಿ ಪ್ರತಿ ರೈಲ್ವೆ ಬಜೆಟ್ ವೇಳೆಯಲ್ಲಿ ತಮ್ಮೂರಿಗೆ ಹೊಸ ರೈಲು ಬಂದೀತೇ ಎಂಬ ಕುತೂಹಲ-ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ.

ಜನರ ಈ ನಿರೀಕ್ಷೆಗೆ ಅನುಗುಣವಾಗಿ ರೈಲ್ವೆ ಇಲಾಖೆ ತಾನು ಘೋಷಿಸುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗಮನಹರಿಸುತ್ತಿಲ್ಲ. ಆದ್ದರಿಂದಲೇ ಹತ್ತಾರು ವರ್ಷಗಳ ಹಿಂದೆ ಕೈಗೆತ್ತಿಕೊಂಡಿರುವ ಹೊಸ ಮಾರ್ಗ ನಿರ್ಮಾಣ, ಗೇಜ್ ಪರಿವರ್ತನೆ, ಜೋಡಿ ಮಾರ್ಗ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ರೈಲ್ವೆಗೆ ಹೆಚ್ಚು ವರಮಾನ ತಂದುಕೊಡಬಹುದಾದ ಹುಬ್ಬಳ್ಳಿ-ಅಂಕೋಲಾ ಮಾರ್ಗ ಸಹ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕುಡಚಿ-ಬಾಗಲಕೋಟೆ ನಡುವಿನ ಹೊಸ ಮಾರ್ಗ ಕಾಮಗಾರಿ ಸಹ ಮಂದಗತಿಯಲ್ಲಿ ಸಾಗುತ್ತಿದೆ.

2012-13ನೇ ಸಾಲಿನಲ್ಲಿ ಬಾದಾಮಿ, ಆಲಮಟ್ಟಿ, ಹಾವೇರಿ ರೈಲು ನಿಲ್ದಾಣಗಳನ್ನು ಆದರ್ಶ ರೈಲು ನಿಲ್ದಾಣವನ್ನಾಗಿ ಪರಿವರ್ತಿಸುವುದಾಗಿ ಇಲಾಖೆ ಘೋಷಿಸಿತ್ತು. ಘೋಷಣೆ ಹೊರಬಿದ್ದು ವರ್ಷವಾದರೂ ಈ ನಿಲ್ದಾಣಗಳು ದುಃಸ್ಥಿತಿಗೆ `ಆದರ್ಶ'ವಾಗಿ ಇದ್ದ ಸ್ಥಿತಿಯಲ್ಲಿಯೇ ಇವೆ.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಕೈಗೊಳ್ಳಬೇಕಾದ ಯೋಜನೆಗಳು ಮತ್ತು ಜನರಿಗೆ ಬೇಕಾದ ರೈಲುಗಳ ಸಂಚಾರದ ಬಗ್ಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ರೈಲ್ವೆ ಇಲಾಖೆಯ ಗಮನಕ್ಕೆ ಬಜೆಟ್ ಮಂಡನೆಗೆ ಮುನ್ನವೇ ತರುತ್ತಿದೆ. ಅವುಗಳನ್ನು ಪರಿಗಣಿಸಿ, ಬಜೆಟ್‌ನಲ್ಲಿ ಸೇರಿಸುವ ಕಾರ್ಯ ಮಾತ್ರ  ಆಗುತ್ತಿಲ್ಲ. ಈ ಕುರಿತು ವಾಣಿಜ್ಯೋದ್ಯಮ ವಲಯದಲ್ಲಿ ಬೇಸರವೂ ಇದೆ.

ಇದ್ದ ರೈಲೂ ಕೈತಪ್ಪಿತು:
ಹುಬ್ಬಳ್ಳಿ- ಮುಂಬೈ ನಡುವೆ ಹೊಸ ರೈಲು ಬೇಕು ಎಂಬ ಬೇಡಿಕೆ ಈಡೇರಿಸುವ ಬದಲಿಗೆ ಮೊದಲಿನಿಂದಲೂ ಇದ್ದ ಯಶವಂತಪುರ- ದಾದರ್ ಎಕ್ಸ್‌ಪ್ರೆಸ್ ರೈಲನ್ನೂ ಇಲಾಖೆ ಹುಬ್ಬಳ್ಳಿಯವರಿಗೆ ಸಿಗದಂತೆ ಮಾಡಿದೆ. 2012-2013ನೇ ಸಾಲಿನಿಂದ ಈ ರೈಲನ್ನು ಪುದುಚೇರಿ ಮತ್ತು ತಿರುನಲ್ವೇಲಿಗೆ ವಿಸ್ತರಿಸಲಾಗಿದ್ದು ಇದರ ನೇರ ಪರಿಣಾಮ ಹುಬ್ಬಳ್ಳಿಯ ಜನರ ಮೇಲಾಗಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಈಗ ಹುಬ್ಬಳ್ಳಿಯವರಿಗೇ ಸೀಟೇ ಸಿಗುವುದಿಲ್ಲ.

ಇದರಿಂದ ಮುಂಬೈಗೆ ತೆರಳಲು ವಾಣಿಜ್ಯೋದ್ಯಮಿಗಳಿಗೆ ಬಹಳ ತೊಂದರೆಯಾಗಿದೆ ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ಎಸ್.ಗಿಣಿಮಾವ. ಹುಬ್ಬಳ್ಳಿಯಲ್ಲಿಯೇ ನೈರುತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ ಇದೆ. ಅಧಿಕಾರಿಗಳಿಗೆ ಸಮಸ್ಯೆಯ ಅರಿವಿದ್ದರೂ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿ ಮೂಲಕ ಸಂಚರಿಸುವ ರೈಲುಗಳಲ್ಲಿ ಹೆಚ್ಚಿನವು ಒಂದೇ ದಿಕ್ಕಿಗೆ ಅಂದರೆ ಧಾರವಾಡ, ಲೋಂಡಾ, ಬೆಳಗಾವಿ, ಮಿರಜ್ ಮಾರ್ಗದಲ್ಲಿ (ಮುಂಬೈ, ದೆಹಲಿ) ಸಂಚರಿಸುತ್ತವೆ. ಹುಬ್ಬಳ್ಳಿಯಿಂದ ಗದಗ, ಬಾಗಲಕೋಟೆ, ವಿಜಾಪುರ ಮಾರ್ಗದಲ್ಲಿ ಸಂಚರಿಸದ ಕಾರಣ ಬ್ರಾಡ್‌ಗೇಜ್ ಮಾರ್ಗದ ಬಳಕೆ ಸಮರ್ಪಕವಾಗಿಲ್ಲ ಎಂದು ಆರೋಪಿಸುತ್ತಾರೆ ವಿಜಾಪುರ ರೈಲ್ವೆ ಕ್ರಿಯಾ ಸಮಿತಿ ಉಪಾಧ್ಯಕ್ಷ ಅಶೋಕ ಡಿ.ಹಳ್ಳೂರ.

ಹಾಲಿ ಹುಬ್ಬಳ್ಳಿ- ವಿಜಾಪುರ - ಸೋಲಾಪುರ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಜನರಿಗೆ ಅನುಕೂಲಕರವಾಗಿಲ್ಲ. ಉದಾಹರಣೆಗೆ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ (ಕುರ್‌ಕುರೆ) ನಸುಕಿನ 4.45ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಅದೇ ರೀತಿ ವಿಜಾಪುರದಿಂದ ಹುಬ್ಬಳ್ಳಿಗೆ ಬರುವುದೂ ಮಧ್ಯರಾತ್ರಿ ವೇಳೆಗೇ. ಈ ಸಂಗತಿಯನ್ನು ಸಮಿತಿ ಹಲವಾರು ಬಾರಿ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ತಂದಿದೆ. ಇದಕ್ಕೂ ಇಲಾಖೆ ಸ್ಪಂದಿಸಿಲ್ಲ ಎಂದು ಅವರು ಆರೋಪಿಸುತ್ತಾರೆ.

ಯಶವಂತಪುರದಿಂದ ದೆಹಲಿಗೆ ಹೋಗುವ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ವಾರದ ನಾಲ್ಕು ದಿನ ಆಂಧ್ರಪ್ರದೇಶದ ಮೂಲಕ ತೆರಳಿದರೆ ಎರಡು ದಿನ ಮಾತ್ರ ಹುಬ್ಬಳ್ಳಿ- ಲೋಂಡಾ- ಬೆಳಗಾವಿ ಮಿರಜ್ ಮೂಲಕ ತೆರಳುತ್ತದೆ.

ಈ ರೈಲು ಆರು ದಿನವೂ ಮಿರಜ್ ಬದಲಿಗೆ ಬಾಗಲಕೋಟೆ- ವಿಜಾಪುರ- ಸೋಲಾಪುರ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು ಎಂಬ ಒತ್ತಾಯ ಕೂಡ ಹಳೆಯದೇ. ಈ ರೈಲನ್ನು ಬದಲಿಸಿದರೆ ಆಂಧ್ರಪ್ರದೇಶದ ಜನತೆಯ ಪ್ರತಿರೋಧ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ಕ್ರಿಯಾ ಸಮಿತಿಗೆ ನೀಡಿರುವ ಉತ್ತರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ಸಂಪರ್ಕ ಕ್ರಾಂತಿ ರೈಲಿನ ಲಾಭ ಮಾತ್ರ ಆಂಧ್ರದವರಿಗೆ ಸಿಗುತ್ತಿದೆ. ಈ ಎಲ್ಲ ಸಂಗತಿಗಳನ್ನು ಒಟ್ಟು ಮಾಡಿ 3-4 ತಿಂಗಳುಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಸಂಸದರು ಒಟ್ಟಾಗಿ ಪ್ರತಿಭಟನೆ ನಡೆಸಿದರಾದರೂ ರೈಲಿನ ಮಾರ್ಗ ಮಾತ್ರ ಬದಲಾಗಲಿಲ್ಲ.

ಈ ಬಾರಿ ಬಜೆಟ್‌ನಲ್ಲಾದರೂ ಒಂದಿಷ್ಟು ಹೊಸ ರೈಲುಗಳು, ಮಾರ್ಗ ನಿರ್ಮಾಣಕ್ಕೆ ಹೆಚ್ಚು ಅನುದಾನ ದೊರೆಯಬಹುದು ಎಂಬುದು ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.

ಬಳ್ಳಾರಿ, ಮುಂಬೈ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಳಿ ಹಾದುಹೋಗಿದ್ದರೂ ಜನರ ಓಡಾಟಕ್ಕೆ ಬೇಕಾದ ರೈಲುಗಳ ಕೊರತೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.