ADVERTISEMENT

ಹಸ್ತಪ್ರತಿ ಸಂಪಾದನೆ: ಎಚ್ಚರಿಕೆ ಅವಶ್ಯ- ಹ.ಕ.ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST
ಮಂಡ್ಯದಲ್ಲಿ ಗುರುವಾರ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಹಿರಿಯ ವಿದ್ವಾಂಸ ಡಾ.ಹ.ಕ.ರಾಜೇಗೌಡ ಉದ್ಘಾಟಿಸಿದರು. ಡಾ.ಎಫ್.ಟಿ.ಹಳ್ಳಿಕೇರಿ, ಪ್ರೊ.ಜಯಪ್ರಕಾಶ್‌ಗೌಡ, ಡಾ.ವೀರೇಶ ಬಡಿಗೇರ, ಪ್ರಭಾರ ಪ್ರಾಚಾರ್ಯ ಶಿವಣ್ಣಗೌಡ ಇದ್ದಾರೆ
ಮಂಡ್ಯದಲ್ಲಿ ಗುರುವಾರ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಹಿರಿಯ ವಿದ್ವಾಂಸ ಡಾ.ಹ.ಕ.ರಾಜೇಗೌಡ ಉದ್ಘಾಟಿಸಿದರು. ಡಾ.ಎಫ್.ಟಿ.ಹಳ್ಳಿಕೇರಿ, ಪ್ರೊ.ಜಯಪ್ರಕಾಶ್‌ಗೌಡ, ಡಾ.ವೀರೇಶ ಬಡಿಗೇರ, ಪ್ರಭಾರ ಪ್ರಾಚಾರ್ಯ ಶಿವಣ್ಣಗೌಡ ಇದ್ದಾರೆ   

ಮಂಡ್ಯ: ಸಾಂಸ್ಕೃತಿಕ ಆಕರಗಳಾಗಿರುವ ಹಸ್ತಪ್ರತಿಗಳನ್ನು ಸಂಪಾದನೆ ಮಾಡುವಾಗ ಸಾಮಾಜಿಕ ಎಚ್ಚರಿಕೆ ಬೇಕು ಎಂದು ಹಿರಿಯ ವಿದ್ವಾಂಸ ಡಾ. ಹ.ಕ.ರಾಜೇಗೌಡ ಸಲಹೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಕರ್ನಾಟಕ ಸಂಘ ಮತ್ತು ಮಹಿಳಾ ಸರ್ಕಾರಿ ಪದವಿ ಕಾಲೇಜು ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ತಾಳೆ ಗರಿಗೆ ಎಣ್ಣೆ ಲೇಪನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

`ಪ್ರಾಚೀನ ಗ್ರಂಥಗಳನ್ನು ಸಂಪಾದನೆ ಮಾಡುವಾಗ ಎದುರಾಗುವಂತಹ ಅನೇಕ ಸವಾಲುಗಳನ್ನು, ಸಮರ್ಥವಾಗಿ ಎದುರಿಸಲು ವ್ಯಾಪಕವಾದ ಓದು, ವಿಷಯ ಸ್ಮರಣೆ, ಹಟ-ಚಲ ಬೇಕು' ಎಂದು ಕಿವಿಮಾತು ಹೇಳಿದರು.

ಬರವಣಿಗೆ ಇತಿಹಾಸ ಬಹಳ ಪ್ರಾಚೀನವಾಗಿದ್ದು, ಆರಂಭದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಅದು, ತಾಳೆ ಗರಿ, ಕೋರಿಕಾಗದ ಹಾಗೂ ಕಡತ ರೂಪದಿಂದ ಡಿಜಿಟಲ್ ಹಂತದವರೆಗೂ ಬೆಳೆದುಬಂದಿದೆ ಎಂದು ವಿವರಿಸಿದರು.

ಶಿಬಿರದ ನಿರ್ದೇಶಕ ಡಾ. ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, `ಆಧುನೀಕರಣದಿಂದಾಗಿ ಹಸ್ತಪ್ರತಿಗಳಂಥ ಸಾಂಸ್ಕೃತಿಕ ಆಕರಗಳು ತಾತ್ಸಾರಕ್ಕೆ ಒಳಗಾಗಿವೆ' ಎಂದು ವಿಷಾದಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಇತಿಹಾಸ ವಿಷಯಗಳನ್ನು ಓದುವವರು ಹಸ್ತಪ್ರತಿ ಹಾಗೂ ಶಾಸನಗಳನ್ನೂ ಓದಬೇಕಿದೆ. ಆದರೆ, ಆ ಕೆಲಸ ಆಗುತ್ತಿಲ್ಲ. ಅಧ್ಯಾಪಕರೂ ಕೂಡಾ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಂಪಿ ವಿ.ವಿ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ವೀರೇಶ್ ಬಡಿಗೇರ, ಮಹಿಳಾ ಸರ್ಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಿವಣ್ಣಗೌಡ ಹಾಗೂ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಬಿ.ಶಂಕರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.