ADVERTISEMENT

ಹಾವೇರಿ: ಸುವರ್ಣ ಭೂಮಿ ಯೋಜನೆ....

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಹಾವೇರಿ: ಬಡ ರೈತರು ಹೆಚ್ಚು ಆದಾಯ ಸಿಗುವ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ  ಜಾರಿಗೆ ತಂದ `ಸುವರ್ಣ ಭೂಮಿ~ ಯೋಜನೆಯ ಹಣ ಫಲಾನುಭವಿಗಳಿಗೆ ಇನ್ನೂ ದೊರೆತಿಲ್ಲ.

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಯೋಜನೆ ಅನುಷ್ಠಾನವಾಗಿದ್ದರೆ, ರಾಜ್ಯದ 10 ಲಕ್ಷ ಸಣ್ಣ ಹಿಡುವಳಿದಾರರಿಗೆ ಮುಂಗಾರು ಹಂಗಾಮಿನೊಳಗೆ 10 ಸಾವಿರ ರೂಪಾಯಿ ಧನಸಹಾಯ ದೊರೆಯಬೇಕಿತ್ತು. ಆದರೆ, ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಪೂರ್ಣ ಪ್ರಮಾಣದ ಧನಸಹಾಯ ರೈತರಿಗೆ ಇನ್ನೂ ಸಿಕ್ಕಿಲ್ಲ.

ಈ ಯೋಜನೆಯ ಜಾರಿಗಾಗಿ ಜಿಲ್ಲೆಯಲ್ಲಿ ಲಾಟರಿ ಮೂಲಕ ಒಟ್ಟು 24,762 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಈವರೆಗೆ 14,613 ಫಲಾನುಭವಿಗಳಿಗೆ ಮಾತ್ರ ಮೊದಲ ಕಂತಿನ ಐದು ಸಾವಿರ ರೂಪಾಯಿ ನೀಡಲಾಗಿದೆ. ಉಳಿದ 10,049 ಫಲಾನುಭವಿಗಳಿಗೆ ಈವರೆಗೆ ಬಿಡಿಗಾಸು ದೊರೆತಿಲ್ಲ.

ಫಲಾನುಭವಿಗಳಿಗೆ ಹಣ ನೀಡಲು ಸರ್ಕಾರವೇ ಇನ್ನೂ  ಹಣ ಬಿಡುಗಡೆಯಾಗಿಲ್ಲ. ಅದೇ ಕಾರಣಕ್ಕಾಗಿ ಫಲಾನುಭವಿಗಳಿಗೆ ಹಣ ನೀಡಲು ವಿಳಂಭವಾಗಿದೆ. ಹಣ ಬಿಡುಗಡೆಯಾದ ತಕ್ಷಣವೇ ಫಲಾನುಭವಿಗಳಿಗೆ ಎರಡೂ ಕಂತಿನ ಹಣವನ್ನು ವಿತರಿಸಲಾಗುವುದು.

ಆದರೆ, ಯಾವಾಗ ಹಣ ಬಿಡುಗಡೆಯಾಗಲಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಒಟ್ಟು 17.50 ಕೋಟಿ ಬೇಕು: ಜಿಲ್ಲೆಯ 24,762 ಫಲಾನುಭವಿಗಳಿಗೆ ಎರಡೂ ಕಂತು ನೀಡಲು ಒಟ್ಟು 24.76 ಕೋಟಿ ರೂಪಾಯಿ ಬೇಕು.
 
ಈಗಾಗಲೇ ಮೊದಲ ಕಂತಿನ ರೂ 12.50 ಕೋಟಿ ಪೈಕಿ 6.92 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಮೊದಲ ಕಂತಿನ ಬಾಕಿ ರೂ 5.48 ಕೋಟಿ ಹಾಗೂ  ಎರಡನೇ ಕಂತಿನ 12 ಕೋಟಿ ಸೇರಿದಂತೆ ಒಟ್ಟು ರೂ 17.50 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪರಾಜು ತಿಳಿಸುತ್ತಾರೆ.

ಹಣ ಬಿಡುಗಡೆ ವಿಳಂಬ: ಯೋಜನೆ ಮೇ ತಿಂಗಳನಲ್ಲಿಯೇ  ಆರಂಭವಾಗಿದೆ. ಜೂನ್ 20 ರೊಳಗೆ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ವಿತರಣೆಯಾಗಬೇಕಿತ್ತು.ಆ ಹಣವನ್ನು ಫಲಾನುಭವಿಗಳು ಸದ್ಭಳಕೆ ಮಾಡಿಕೊಂಡಿದ್ದಾರೋ, ಇಲ್ಲವೋ ಎಂಬುದನ್ನು ಪರಿಶೀಲಿಸಿದ ನಂತರ ಅಂದರೆ, ಆಗಸ್ಟ್ ತಿಂಗಳ ಅಂತ್ಯದೊಳಗೆ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕು ಎಂಬ ನಿಯಮವನ್ನು ಸರ್ಕಾರ ರೂಪಿಸಿತ್ತು.

ಫಲಾನುಭವಿಗಳ ಜಮೀನು ಪರಿಶೀಲನಾ ಕಾರ್ಯದ ಹೊಣೆಯನ್ನು  ಸರ್ಕಾರ ಬಾಹ್ಯ ಸಂಸ್ಥೆಗಳಿಗೆ ಒಪ್ಪಿಸಿದೆ.  ಆದರೆ, ಜಿಲ್ಲೆಯಲ್ಲಿ ಪರಿಶೀಲನೆಗೆ ಈವರೆಗೂ ಈ ಸಂಸ್ಥೆಗಳ ಸಿಬ್ಬಂದಿ ಬಂದಿಲ್ಲ. ಹೀಗಾಗಿ ಎರಡನೇ ಕಂತಿನ ಹಣ ರೈತರಿಗೆ ದೊರೆಯಲು ಇನ್ನಷ್ಟು ವಿಳಂಬವಾಗುತ್ತದೆ ಎಂದು ಕೃಷಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಸಾಲದ ಹೊರೆ: ನಮ್ಮಲ್ಲಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ನಮಗೆ ಅನುಕೂಲವಾಗುವ ಬೆಳೆಯನ್ನು ಬೆಳೆಯುತ್ತ್ದ್ದಿದೆವು. ಆದರೆ, ಸರ್ಕಾರ ಸುವರ್ಣಭೂಮಿ ಯೋಜನೆಯಲ್ಲಿ 10 ಸಾವಿರ ರೂಪಾಯಿ ಧನ ಸಹಾಯ ನೀಡುವುದಾಗಿ ಹೇಳಿದ ಮೇಲೆ ಸಾಲ ಮಾಡಿ ಹತ್ತಿ, ಗೋವಿನಜೋಳ ಇತರ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆದಿದ್ದೇವೆ. ಆದರೆ ಹಣ ಯಾವಾಗ ಬರುತ್ತದೆ ಎಂಬುದನ್ನು ಅಧಿಕಾರಿಗಳು ತಿಳಿಸುತ್ತಿಲ್ಲ.

ಸಾಲದ ಹೊರೆ ಮಾತ್ರ ಬೆಳೆಯುತ್ತಿದೆ ಎಂದು ಫಲಾನುಭವಿ ರೈತ ಹಾವೇರಿ ತಾಲ್ಲೂಕಿನ ಕೊರಡೂರು ಗ್ರಾಮದ ರಾಮಣ್ಣ ಸರಗುಣಕಿ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.