ADVERTISEMENT

ಹುಬ್ಬಳ್ಳಿ: ಟ್ರಾನ್ಸ್‌ಫಾರ್ಮರ್ ರಿಪೇರಿ ಘಟಕ -ಶೋಭಾ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ವಿಜಾಪುರ: ಹುಬ್ಬಳ್ಳಿಯ ಎನ್‌ಜಿಇಎಫ್‌ನಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯ   (ಕವಿಕಾ) ವಿದ್ಯುತ್ ಪರಿವರ್ತಕಗಳ ರಿಪೇರಿ ಘಟಕ ಆರಂಭಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದ ವಿದ್ಯುತ್ ಪರಿವರ್ತಕಗಳು ಹೆಚ್ಚಾಗಿ ಹಾಳಾಗುತ್ತಿವೆ. ವಿಫಲಗೊಂಡ ವಿದ್ಯುತ್ ಪರಿವರ್ತಕಗಳ ಗುಣಮಟ್ಟದ ರಿಪೇರಿಗಾಗಿ ಕರ್ನಾಟಕ ವಿದ್ಯುತ್ ಕಾರ್ಖಾನೆಯ ಶಾಖೆ ಈ ಭಾಗದಲ್ಲಿ ಸ್ಥಾಪನೆಯಾಗಲೇಬೇಕಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಎನ್‌ಜಿಇಎಫ್‌ನ 60 ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಇನ್ನು 2-3 ತಿಂಗಳಲ್ಲಿ ಅಲ್ಲಿ ಕವಿಕಾ ಘಟಕ ಆರಂಭಗೊಳ್ಳಲಿದೆ. ಭಾನುವಾರ (ಇದೇ 11ರಂದು) ನಾನು ಆ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿಯವರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ~ ಎಂದು ಹೇಳಿದರು.

`ಎನ್‌ಜಿಇಎಫ್ ಈಗ ಹಾನಿಯಲ್ಲಿದೆ. ಅಲ್ಲಿ ಕವಿಕಾ ಘಟಕ ಸ್ಥಾಪಿಸುವುದರಿಂದ ಅದು ಆರ್ಥಿಕವಾಗಿ ಚೇತರಿಸಿಕೊಳ್ಳಲಿದ್ದು, ಉತ್ತರ ಕರ್ನಾಟಕದ ರೈತರಿಗೂ ಸಕಾಲದಲ್ಲಿ ಗುಣಮಟ್ಟದ ವಿದ್ಯುತ್ ಪರಿವರ್ತಕಗಳು ಲಭ್ಯವಾಗಲಿವೆ ~ ಎಂದು ತಿಳಿಸಿದರು.

`ವಿದ್ಯುತ್ ಪರಿವರ್ತಕಗಳ ನಿರ್ವಹಣೆಯೇ ದೊಡ್ಡ ಹೊರೆಯಾಗಿದೆ. ಅಕ್ರಮ ಪಂಪ್‌ಸೆಟ್‌ಗಳು ಪ್ರತಿ ದಿನವೂ ಹೆಚ್ಚುತ್ತಲೇ ಇವೆ. ಇದರಿಂದ ರೈತರು ಹಾಗೂ ಸರ್ಕಾರಕ್ಕೂ ಹಾನಿಯಾಗುತ್ತಿದೆ ಎಂದರು.

ಅಕ್ರಮ ಪಂಪ್‌ಸೆಟ್ ಹಾವಳಿ ನಿಯಂತ್ರಣಕ್ಕಾಗಿ ಕೇವಲ 25 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನಷ್ಟೇ ಅಳವಡಿಸಲು ನಿರ್ಧರಿಸಿದ್ದೇವೆ~ ಎಂದು ಶೋಭಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.