ಮೈಸೂರು: `ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಸುಮಾರು 700 ಕೋಟಿ ರೂಪಾಯಿಗಳ ನೆರವು ಕೇಳಲಾಗಿದೆ' ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿಯ ದಾಸೇಗೌಡನಕೊಪ್ಪಲು ಗ್ರಾಮದ ಬಳಿ ತುರುಗನೂರು ಶಾಖಾ ನಾಲೆಯ 5, 11 ಮತ್ತು 12ನೇ ವಿತರಣಾ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
`ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸುಧಾರಣೆಗೆ ಅವಕಾಶ ಕೊಡಿ ಎಂದು ಮನವಿ ಅರ್ಪಿಸಿದ್ದೇನೆ. ಅಲ್ಲದೆ, ವಿವಿಧ ಮೂಲಗಳಿಂದ ಸುಮಾರು ರೂ 700 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶೀಘ್ರದಲ್ಲಿಯೇ ಅವರಿಂದ ಅನುಮೋದನೆ ದೊರೆಯುವ ನಿರೀಕ್ಷೆಯಿದೆ' ಎಂದು ತಿಳಿಸಿದರು.
`ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ತರಿಸಿಕೊಂಡು ಅಗತ್ಯ ಆಧರಿಸಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ನಮ್ಮದು ನಾಡು ಕಟ್ಟುವ ಅಭಿವೃದ್ಧಿಪರ ಇಲಾಖೆಯಾಗಿದ್ದು, ಉತ್ತಮ ಅಧಿಕಾರಿಗಳು ಮತ್ತು ನೌಕರರನ್ನು ನೇಮಕ ಮಾಡುತ್ತೇವೆ' ಎಂದು ಹೇಳಿದರು.
ಸಚಿವರು ದಾಸೇಗೌಡನಕೊಪ್ಪಲು ಗ್ರಾಮದ ತುರುಗನೂರು ಶಾಖಾ ನಾಲೆಯ 5, 11 ಮತ್ತು 12ನೇ ವಿತರಣಾ ನಾಲೆಗಳನ್ನು ಒಟ್ಟು ರೂ 7.16 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಈ ನಾಲೆಗಳ 35.8 ಕಿ.ಮೀ. ಇದ್ದು, ಇವುಗಳ ಅಭಿವೃದ್ಧಿಯಿಂದ 5,168 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.
ಇದಕ್ಕೂ ಮುನ್ನ ಸಚಿವರು ತಿ. ನರಸೀಪುರ ತಾಲ್ಲೂಕಿನ ರಾಮಸ್ವಾಮಿ ಕಾಲುವೆ ಬಳಿ ರೂ 56 ಲಕ್ಷ ವೆಚ್ಚದಿಂದ ಕೊರಟಗೆರೆ-ಬಾವಲಿ ರಸ್ತೆಯ 800 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನೀರಾವರಿ ವಲಯದ ಮುಖ್ಯ ಎಂಜಿನಿಯರ್ ಬಿ.ಶಿವಶಂಕರ್, ಸುಪರಿಂಟೆಂಡಿಂಗ್ ಎಂಜಿನಿಯರ್ ಶಂಕರೇಗೌಡ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.