ಬೆಂಗಳೂರು: ಹೈಕೋರ್ಟ್‌ಗೆ ಇದೇ 23ರಿಂದ ಮೇ 20ರ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.
ವಾರಕ್ಕೆ ಎರಡು ದಿನಗಳು ರಜಾಕಾಲದ ಪೀಠ ಕಾರ್ಯ ನಿರ್ವಹಿಸಲಿದೆ. ಅಂದು ತುರ್ತಾಗಿ ನಡೆಯಬೇಕಿರುವ ಅರ್ಜಿಗಳ ವಿಚಾರಣೆಯನ್ನು ಮಾತ್ರ ನ್ಯಾಯಮೂರ್ತಿಗಳು ಕೈಗೆತ್ತಿಕೊಳ್ಳಲಿದ್ದಾರೆ. ಆದರೆ ಗುಲ್ಬರ್ಗ ಮತ್ತು ಧಾರವಾಡ ಸಂಚಾರಿ ಪೀಠಗಳಲ್ಲಿ ರಜಾಕಾಲದ ಪೀಠ ಕಾರ್ಯ ನಿರ್ವಹಿಸುವುದಿಲ್ಲ. ಆ ಭಾಗಗಳ ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿಯೇ ನಡೆಸಲಾಗುವುದು.
ರಜಾಕಾಲದಲ್ಲಿ ಬೆಂಗಳೂರಿನ ಪ್ರಧಾನ ಪೀಠದ ಕಚೇರಿಯು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಪೀಠ ಕಾರ್ಯನಿರ್ವಹಿಸುವ ದಿನಗಳಲ್ಲಿ ಸಂಜೆ 5ರವರೆಗೆ ತೆರೆದಿರುತ್ತದೆ. ಸಂಚಾರಿ ಪೀಠಗಳಲ್ಲಿ ರಜಾಕಾಲದ ದಿನಗಳಲ್ಲಿ ಬೆಳಿಗ್ಗೆ 7.30ರಿಂದ 11ರವರೆಗೆ ಹಾಗೂ ಬೆಂಗಳೂರಿನಲ್ಲಿ ಪೀಠ ಕಾರ್ಯನಿರ್ವಹಿಸುವ ದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಚೇರಿ ತೆರೆದಿರುತ್ತದೆ. ಅಂದು ತುರ್ತು ಪ್ರಕರಣಗಳನ್ನು ದಾಖಲು ಮಾಡಬಹುದಾಗಿದೆ. ರಜಾಕಾಲದ ಪೀಠವು ಏಪ್ರಿಲ್ 25, 27 ಹಾಗೂ ಮೇ ತಿಂಗಳ 2, 4, 8, 10, 15 ಹಾಗೂ 17ರಂದು ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.