ಬೆಂಗಳೂರು: ‘ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡು ತಗುಲಿಆರು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸಪ್ಪ ಇನ್ನೂ ಗುಣಮುಖವಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು’ ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಹನೀಫ್ ಅವರು, ‘ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ವರ್ತಿವಾಡಿ ಕೋಗಿಲವಾಡಿ ಗ್ರಾಮದ ಬಸಪ್ಪನು ಅರಣ್ಯ ಇಲಾಖೆ ಮನವಿ ಮೇರೆಗೆ ಅರಣ್ಯಕ್ಕೆ ಆನೆ ಓಡಿಸಲು ತೆರಳಿದ್ದ. ಆ ಸಂದರ್ಭದಲ್ಲಿ ಬಸಪ್ಪನಿಗೆ ಐದು ಕಡೆ ಚರೆಗುಂಡು ತಗುಲಿದೆ.
ಕೂಡಲೇ ಅರಣ್ಯ ಸಿಬ್ಬಂದಿಯವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಒಂದು ಗುಂಡು ಮಾತ್ರ ಹೊರತೆಗೆಯಲಾಗಿತ್ತು. ಉಳಿದ ನಾಲ್ಕು ಗುಂಡುಗಳು ದೇಹದಲ್ಲೇ ಇದ್ದವು. ಇತ್ತೀಚೆಗೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಸಿ ಎರಡು ಗುಂಡುಗಳನ್ನು ಹೊರತೆಗೆಯಲಾಗಿದೆ’ ಎಂದರು.
‘ಬಸಪ್ಪನ ದೇಹದಲ್ಲಿ ಇನ್ನೂ ಎರಡು ಗುಂಡುಗಳಿದ್ದು, ಅವುಗಳನ್ನು ಹೊರತೆಗೆಯಲು ಹಾಗೂ ಆತನ ಚಿಕಿತ್ಸೆಯ ಸಂಪೂರ್ಣ ವೆಚ್ಚ ಬರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಬಸಪ್ಪ ಕುಟುಂಬದವರು ಹುಣಸೂರು ತಾಲ್ಲೂಕಿನ ಉಪ ವಿಭಾಗಾಧಿಕಾರಿ, ಮೈಸೂರು ಜಿಲ್ಲೆಯ ಉಪ ಅರಣ್ಯಾಧಿಕಾರಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ದೂರಿದರು.
ಬಸಪ್ಪ ಮಾತನಾಡಿ, ‘ನಾವು ದಿನಗೂಲಿ ನೌಕರರು. ಒಂದು ದಿನ ದುಡಿಯದಿದ್ದರೂ ಅಂದಿನ ಊಟಕ್ಕೆ ಕಷ್ಟವಾಗುತ್ತದೆ. ಮನೆಯಲ್ಲಿ ಎರಡು ವಾರಗಳ ಹಿಂದೆ ಅಪ್ಪ ತೀರಿಕೊಂಡಿದ್ದಾರೆ. ಹೆಂಡತಿಯೊಬ್ಬಳೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ನನ್ನ ಕಷ್ಟ ಅರ್ಥ ಮಾಡಿಕೊಂಡು ನ್ಯಾಯಯುತ ಪರಿಹಾರ ಒದಗಿಸಬೇಕು’ ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.