ADVERTISEMENT

ಅತೃಪ್ತರಾದ ಬಿಜೆಪಿ ಟಿಕೆಟ್‌ ವಂಚಿತರು

ಡಿಕೆಶಿ ಜೊತೆ ಅಶೋಕ್ ಪೂಜಾರಿ, ಭರಮಗೌಡ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:28 IST
Last Updated 10 ನವೆಂಬರ್ 2019, 19:28 IST
   

ಬೆಂಗಳೂರು: ವಿಧಾನಸಭಾ ಉಪಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಬಿಜೆಪಿ ಅತೃಪ್ತರು ಕಾಂಗ್ರೆಸ್ ಕಡೆ ಮುಖ ಮಾಡಿರುವುದು ಆ ಪಕ್ಷದ ಮುಖಂಡರ ತಲೆಬಿಸಿ ಹೆಚ್ಚಿಸಿದೆ. ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಪ್ರಕಟಿಸಿರುವುದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕಕ್ಕೆ ಕಾರಣವಾಗಿದೆ.

ಅನರ್ಹ ಶಾಸಕರಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಇದೇ 13ರಂದು ಪ್ರಕಟವಾಗುವ ನಿರೀಕ್ಷೆ ಇದ್ದು,ಬಿಜೆಪಿ, ಜೆಡಿಎಸ್ ಮುಖಂಡರು ಈ ತೀರ್ಪಿಗಾಗಿ ಕಾಯುತ್ತಿದ್ದಾರೆ.

ಎಲ್ಲಾ15 ಕ್ಷೇತ್ರಗಳಲ್ಲೂ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ, ಅತೃಪ್ತರು ಪಕ್ಷಾಂತರಕ್ಕೆ ಮುಂದಾಗಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅಶೋಕ್ ಪೂಜಾರಿ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಕಾಂಗ್ರೆಸ್‌ ಟಿಕೆಟ್ ಪಡೆದು, ಸ್ಪರ್ಧಿಸುವ ಪ್ರಯತ್ನ ಆರಂಭಿಸಿದ್ದಾರೆ.

ADVERTISEMENT

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಗೋಕಾಕ ಕ್ಷೇತ್ರದ ಅಶೋಕ್ ಪೂಜಾರಿ, ಕಾಗವಾಡ ಕ್ಷೇತ್ರದ ಭರಮಗೌಡ (ರಾಜು) ಕಾಗೆ ಅವರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಭಾನುವಾರ ಭೇಟಿಮಾಡಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿಸಲು ಶಾಸಕ ಸತೀಶ್ ಜಾರಕಿಹೊಳಿ ಪ್ರಯತ್ನ ಆರಂಭಿಸಿದ್ದು, ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಮುಖಂಡ ಸಿದ್ದರಾಮಯ್ಯ ಸಹ ಲಖನ್‌ಗೆ ಟಿಕೆಟ್ ನೀಡುವ ಅಭಯ ನೀಡಿದ್ದಾರೆ. ಹಾಗಾಗಿ ಪೂಜಾರಿ ಅವರಿಗೆ ಟಿಕೆಟ್ ಸಿಗುವುದು ಕಷ್ಟಕರ ಎನ್ನಲಾಗಿದೆ.

ಕಾಗವಾಡ ಕ್ಷೇತ್ರದಿಂದ ಟಿಕೆಟ್ ಕೊಡುವುದಾದರೆ ಕಾಂಗ್ರೆಸ್ ಸೇರುವುದಾಗಿ ಭರಮಗೌಡ ಹೇಳಿದ್ದಾರೆ. ಆದರೆ ಶಿವಕುಮಾರ್ ಸ್ಪಷ್ಟ ಭರವಸೆ ನೀಡಿಲ್ಲ. ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ರಿಜ್ವಾನ್‌ಗೆ ಟಿಕೆಟ್ ಹೆಚ್ಚಿದ ವಿರೋಧ
ಶಿವಾಜಿನಗರ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್‌ಗೆಟಿಕೆಟ್ ನೀಡುವುದಕ್ಕೆ ಪಕ್ಷದಲ್ಲಿ ವಿರೋಧ ಹೆಚ್ಚುತ್ತಿದ್ದು, ಸಭೆಯಲ್ಲಿ ಮತ್ತೊಮ್ಮೆ ಇದೇ ವಿಚಾರ ಪ್ರಸ್ತಾಪವಾಗಿದೆ. ರಿಜ್ವಾನ್ ಬಿಟ್ಟು ಬೇರೆಯವರಿಗೆ ಅವಕಾಶ ಕೊಡಬೇಕುಎಂದು ಹಿರಿಯ ಮುಖಂಡರು ಪಟ್ಟುಹಿಡಿದ್ದಾರೆ.

ಸಲೀಂ ಅಹಮದ್, ಎಸ್.ಎ.ಹುಸೇನ್ ಹೆಸರು ಪ್ರಸ್ತಾಪವಾಗಿದ್ದು, ರಿಜ್ವಾನ್‌ಗೆ ಟಿಕೆಟ್ ಕೊಡದಂತೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಅವರು ರಿಜ್ವಾನ್‌ ಪರ ನಿಂತಿದ್ದರೆ, ಇತರ ಮುಖಂಡರುವಿರೋಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.