ADVERTISEMENT

11 ಬಿ ದಾಖಲೆ ನಂಬಿ ಆಸ್ತಿ ಖರೀದಿಸಬೇಡಿ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಮನವಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST
11 ಬಿ ದಾಖಲೆ ನಂಬಿ ಆಸ್ತಿ ಖರೀದಿಸಬೇಡಿ
11 ಬಿ ದಾಖಲೆ ನಂಬಿ ಆಸ್ತಿ ಖರೀದಿಸಬೇಡಿ   
ಬೆಂಗಳೂರು: ಕೈಬರಹದ ದಾಖಲೆ ಹಾಗೂ 11 ಬಿ ದಾಖಲೆ ನಂಬಿ ನಿವೇಶನ, ಮನೆ ಖರೀದಿಸಿ ಮೋಸಕ್ಕೆ ಒಳಗಾಗಬೇಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್‌.ಕೆ. ಪಾಟೀಲ ಅವರು ಮನವಿ ಮಾಡಿದರು.
 
ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂತಹ ಘಟನೆಗಳು ವರದಿಯಾಗಿದ್ದು, ಇತರೆ ಜಿಲ್ಲೆಗಳು ಇಂತಹದೇ ಘಟನೆಗಳು ನಡೆಯುತ್ತಿವೆ ಎಂಬ ಮಾಹಿತಿಗಳಿವೆ. ಭೂ ಪರಿವರ್ತನೆಯಾಗದ ಬಡಾವಣೆಗಳಲ್ಲಿ ನಿವೇಶನ, ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡಬಾರದು ಎಂದೂ ಅವರು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
 
ರಾಜ್ಯದ ವಿವಿಧ ಜಿಲ್ಲೆಗಳ ಉಪ ನೋಂದಣಾಧಿಕಾರಿಗಳು ಕೈಬರಹದ ದಾಖಲೆ ಹಾಗೂ 11 ಬಿ ದಾಖಲೆ ಆಧರಿಸಿ ಆಸ್ತಿ ಪರಬಾರೆಯ ಕ್ರಯಪತ್ರ ನೋಂದಣಿ ಮಾಡುತ್ತಿರುವುದು ಕಂಡುಬಂದಿದೆ. ಈ ಎರಡೂ ದಾಖಲೆಗಳನ್ನು ಆಧರಿಸಿ ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
 
ಇ–ಸ್ವತ್ತು ದಾಖಲೆಗಳಿಲ್ಲದೇ  ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ, ಮಾರೇನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಇ–ಖಾತೆಗಳನ್ನು ನೀಡಿ, ಆಸ್ತಿ ಮಾರಾಟವಾದ ಬಳಿಕ ಇ–ಖಾತೆಗಳೇ ಅಕ್ರಮ ಎಂದು ರದ್ದುಮಾಡಿರುವ ಪ್ರಕರಣಗಳು ನಡೆದಿದ್ದವು. ಈ ಸಂಬಂಧ ಪಂಚಾಯಿತಿಗಳ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಸೇರಿ 11 ಜನರನ್ನು ಅಮಾನತು ಮಾಡಲಾಗಿದೆ.  ಪಂಚಾಯಿತಿ ಸಿಬ್ಬಂದಿ ಹಾಗೂ 3 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೂ ಸೇರಿ 14 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
 
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ದಾಖಲೀಕರಣಕ್ಕೆ ವಿಶೇಷ ಅಂತರ್ಜಾಲ ತಾಣ ಅಭಿವೃದ್ಧಿ ಪಡಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ. ಎಲ್ಲಾ ಆಸ್ತಿಗಳ ವಿವರ ಈ ಅಂತರ್ಜಾಲದಲ್ಲಿ ಲಭ್ಯವಾಗುವುದರಿಂದ ಇ–ಸ್ವತ್ತು ಬಳಸಿ ಅಕ್ರಮ ನಡೆಸುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದರು.
 
**
11 ಬಿ ನಮೂನೆ ಎಂದರೇನು?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಅಥವಾ ಅರೆ ಸರ್ಕಾರಿ ಜಮೀನುಗಳಲ್ಲದೇ ಖಾಸಗಿ ಖಾಲಿ ಜಮೀನು, ಕಟ್ಟಡ, ಮನೆ, ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗದ ಅನಧಿಕೃತ ಬಡಾವಣೆಗಳ ನಿವೇಶನ, ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಿಗೆ 11 ಬಿ ನಮೂನೆಯಲ್ಲಿ ಇ–ಖಾತೆ ನೀಡಲಾಗುತ್ತಿದೆ.
 
ಸದರಿ ದಾಖಲೆಯು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯೊಂದಿಗೆ ಇದ್ದರೆ ಮಾತ್ರ ಅಧಿಕೃತವಾಗಿರುತ್ತದೆ. ಒಂದು ವೇಳೆ ಅಕ್ರಮವಾಗಿ ಈ ದಾಖಲೆ ನೀಡಿದ್ದರೆ 3 ತಿಂಗಳ ಒಳಗೆ ಅದನ್ನು ರದ್ದುಪಡಿಸುವ ಅಧಿಕಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿಗೆ ಇದೆ.
 
ವಿದ್ಯುತ್‌  ಮತ್ತು ಇಂಟರ್‌ನೆಟ್ ಸೌಲಭ್ಯ ಇಲ್ಲವೆಂಬ ಕಾರಣ ಮುಂದೊಡ್ಡಿ ಕೆಲವು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೈಬರಹದಲ್ಲಿ 11 ಬಿ ನಮೂನೆ ನೀಡುತ್ತಿದ್ದಾರೆ. ಕೆಲವೊಮ್ಮೆ ಡಿಜಿಟಲ್ ಸಹಿ ಇರುವ ಅಧಿಕೃತ ದಾಖಲೆ ನೀಡುತ್ತಿದ್ದಾರೆ. ಆಸ್ತಿ 
 
ಬೇರೆಯವರಿಗೆ ಮಾರಾಟವಾದ ಬಳಿಕ, ಇದನ್ನು ರದ್ದುಪಡಿಸುತ್ತಿದ್ದಾರೆ. ಇದರಿಂದಾಗಿ ನಿವೇಶನ ಖರೀದಿಸಿದವರು ವಂಚನೆಗೆ ಒಳಗಾಗುತ್ತಿರುವುದು ಪತ್ತೆಯಾಗಿದೆ.
 
**
ಬರಪೀಡಿತ ತಾಲ್ಲೂಕುಗಳಲ್ಲಿ 150 ದಿನ ಉದ್ಯೋಗ
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗ) ರಾಜ್ಯದ 139 ತಾಲ್ಲೂಕುಗಳಲ್ಲಿ  ಒಬ್ಬ ವ್ಯಕ್ತಿಗೆ ಕನಿಷ್ಠ 150 ದಿನ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
 
ನಿಯಮಗಳಂತೆ ಕನಿಷ್ಠ 100 ದಿನ ಕೂಲಿ ನೀಡಬೇಕು. ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವ ಕಾರಣದಿಂದ ಈ ದಿನಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.
 
ನರೇಗ ಯೋಜನೆಯಡಿ ಈ ಸಾಲಿಗೆ 6 ಕೋಟಿ ಮಾನವ ದಿನಗಳನ್ನು ಸೃಜಿಸಲು ₹2,500 ಕೋಟಿ ಒದಗಿಸಿತ್ತು. ರಾಜ್ಯದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ 10 ಕೋಟಿ ಮಾನವ ದಿನಗಳನ್ನು ಸೃಜಿಸಲು  ಒಪ್ಪಿಗೆ ಸೂಚಿಸಿದ್ದು, ₹1 ಸಾವಿರ ಕೋಟಿ ಹೆಚ್ಚುವರಿಯಾಗಿ ಸಿಗಲಿದೆ ಎಂದು ತಿಳಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.