ADVERTISEMENT

ಎನ್‌ಎಚ್‌ಎಂ ಸಿಬ್ಬಂದಿ ವೇತನ ಶೇ 15 ಹೆಚ್ಚಳಕ್ಕೆ ಪ್ರಸ್ತಾವ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 16:38 IST
Last Updated 23 ಫೆಬ್ರುವರಿ 2023, 16:38 IST
   

ಬೆಂಗಳೂರು: ರಾಷ್ಟ್ರೀಯ ಅರೋಗ್ಯ ಅಭಿಯಾನದಲ್ಲಿ (ಎನ್‌ಎಚ್‌ಎಂ) ಗುತ್ತಿಗೆ ಮತ್ತು ಹೊರ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನವನ್ನು ಶೇಕಡ 15ರಷ್ಟು ಹೆಚ್ಚಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಬಿಜೆಪಿಯ ಪೂರ್ಣಿಮಾ ಕೆ. ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಗುರುವಾರ ಉತ್ತರಿಸಿದ ಅವರು, ‘ಎನ್‌ಎಚ್‌ಎಂನಲ್ಲಿ 21,542 ಸಿಬ್ಬಂದಿ ನೇರವಾಗಿ ಸರ್ಕಾರದ ಅಡಿ ಗುತ್ತಿಗೆಯಲ್ಲಿ ಮತ್ತು 3,494 ಸಿಬ್ಬಂದಿ ಹೊರ ಗುತ್ತಿಗೆಯಡಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಈಗ ವೇತನ ಹೆಚ್ಚಳಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.

ಪೂರ್ಣಿಮಾ ಮಾತನಾಡಿ, ‘ಎನ್‌ಎಚ್‌ಎಂ ಸಿಬ್ಬಂದಿಗೆ ವೇತನ ಪಾವತಿಯಲ್ಲಿ ವಂಚನೆಯಾಗುತ್ತಿದೆ. ಭವಿಷ್ಯನಿಧಿ ಮತ್ತು ಕಾರ್ಮಿಕ ವಿಮಾ ನಿಗಮದ ಕಂತು ಪಾವತಿಸುತ್ತಿಲ್ಲ. ಈ ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಲವು ದಿನಗಳಿಂದ ಮುಷ್ಕರ ನಡೆಸುತ್ತಿರುವ ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.

ADVERTISEMENT

ಬಿಜೆಪಿಯ ಕುಮಾರ್‌ ಬಂಗಾರಪ್ಪ, ಜೆಡಿಎಸ್‌ನ ಸಾ.ರಾ. ಮಹೇಶ್‌, ವೆಂಕಟರಾವ್‌ ನಾಡಗೌಡ ಕೂಡ ಎನ್‌ಎಚ್‌ಎಂ ಸಿಬ್ಬಂದಿಯ ವೇತನ ಮತ್ತು ಇತರ ಸೌಲಭ್ಯಗಳಲ್ಲಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಒಡಿಶಾ, ಪಂಜಾಬ್‌, ರಾಜಸ್ಥಾನ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಎನ್‌ಎಚ್ಎಂ ಸಿಬ್ಬಂದಿಯ ಸೇವೆ ಕಾಯಂಗೊಳಿಸಲಾಗಿದೆ. ನಮ್ಮ ರಾಜ್ಯದಲ್ಲೂ ಅವರ ಸೇವೆ ಕಾಯಂ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಸುಧಾಕರ್‌, ‘ಎನ್‌ಎಚ್‌ಎಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೀಮಿತವಾಗಿ ಈ ಸಿಬ್ಬಂದಿ ನೇಮಿಸಲಾಗಿದೆ. ಹೊರ ಗುತ್ತಿಗೆಯಲ್ಲಿರುವ 3,494 ಸಿಬ್ಬಂದಿಯನ್ನೂ ನೇರ ಗುತ್ತಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಸೇವೆ ಕಾಯಂ ಮಾಡುವುದು ಅಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.