ADVERTISEMENT

ವಿಜಯೇಂದ್ರ ವಿರುದ್ಧ ₹150 ಕೋಟಿ ಆರೋಪ: ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 14:15 IST
Last Updated 15 ಡಿಸೆಂಬರ್ 2024, 14:15 IST
   

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಬಿ.ವೈ. ವಿಜಯೇಂದ್ರ ವಿರುದ್ಧ ಆ ಪಕ್ಷದ ಮುಖಂಡ ಅನ್ವರ್ ಮಾಣಿಪ್ಪಾಡಿ ಮಾಡಿರುವ ₹150 ಕೋಟಿ ಆರೋಪವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಕ್ಫ್‌ ಅಕ್ರಮದ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸದಂತೆ ವಿಜಯೇಂದ್ರ ತಮಗೆ ₹ 150 ಕೋಟಿ ಆಮಿಷ ಒಡ್ಡಿದ್ದರು ಎಂದು ಆಗ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿ ಆರೋಪಿಸಿದ್ದಾರೆ. ಹೀಗಾಗಿ ವಿಜಯೇಂದ್ರ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಅನ್ವರ್ ಮಾಣಿಪ್ಪಾಡಿ ಬರೆದಿರುವ ಪತ್ರ ಪ್ರಧಾನಿಗೆ ಇನ್ನೂ ತಲುಪಿಲ್ಲ ಅನಿಸುತ್ತಿದೆ. ಒಂದು ವೇಳೆ ತಲುಪಿದ್ದರೆ ಈ ಭ್ರಷ್ಟಾಚಾರ ಪ್ರಕರಣವನ್ನು ಅವರು ಸಿಬಿಐಗೆ ಯಾಕೆ ವಹಿಸಿಲ್ಲ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು. ಬಿಜೆಪಿ ವಕ್ತಾರರಾಗಿ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ವ್ಯಕ್ತಿ ಪತ್ರ ಬರೆದಿರುವುದು ಬಹಿರಂಗವಾಗಿದ್ದರೂ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರಸ್ತುತ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಆನೆಗಳನ್ನು ಕೊಲ್ಲಲು ಅನುಮತಿ ಬೇಕು ಎಂದು ಕೇಳಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ವನ್ಯಜೀವಿಗಳನ್ನು ಕೊಲ್ಲಬೇಕೆಂದು ಬಹಿರಂಗವಾಗಿ ಮನವಿ ಮಾಡಿರುವ ಹರೀಶ್ ಪೂಂಜಾ ವಿರುದ್ಧ ಅರಣ್ಯ ಇಲಾಖೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಎ. ಆನಂದ್, ಓಬಳೇಶ್, ಪುಟ್ಟರಾಜು, ಚಂದ್ರಶೇಖರ್, ನವೀನ್ ಸುಂಕದಕಟ್ಟೆ, ಕುಶಾಲ್ ಹಾರುವೇಗೌಡ, ಉಮೇಶ್, ರವಿ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.