ಬೆಂಗಳೂರು: ‘ಬಳ್ಳಾರಿಗೆ ಹೊಂದಿಕೊಂಡಿರುವ ಸಂಜೀವ ರಾಯನ ಕೋಟೆಯಲ್ಲಿ ಕೆಐಎಡಿಬಿ ವತಿಯಿಂದ ‘ಜೀನ್ಸ್ ಪಾರ್ಕ್’ ಸ್ಥಾಪಿಸಲು ಈಗಾಗಲೇ 154 ಎಕರೆ ಜಮೀನು ಸ್ವಾಧೀನ ಪಡಿಸಲಾಗಿದೆ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಈ ಪಾರ್ಕ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಜೀನ್ಸ್ ಉಡುಪು ತಯಾರಿಕೆಯ ಕಂಪನಿಗಳೂ ಇರುವಂತೆ ನೋಡಿಕೊಳ್ಳಲಾಗುವುದು’ ಎಂದಿದ್ದಾರೆ.
‘ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲಕಚ್ಚಿದೆ. ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಈಗ ಬಳ್ಳಾರಿಯಲ್ಲಿನ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಹರಿದಿದೆ. ಇದನ್ನು ನಾವು ಸದವಕಾಶವಾಗಿ ಪರಿವರ್ತಿಸಿಕೊಂಡು, ಹೂಡಿಕೆಯನ್ನು ಆಕರ್ಷಿಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಬಳ್ಳಾರಿಯಲ್ಲಿ 500ಕ್ಕಿಂತಲೂ ಹೆಚ್ಚು ಜೀನ್ಸ್ ಉಡುಪು ತಯಾರಿಕೆ ಘಟಕಗಳಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಇದಕ್ಕೆ ವ್ಯವಸ್ಥಿತ ರೂಪ ಕೊಟ್ಟು, ರಫ್ತು ಕೇಂದ್ರಿತವಾಗಿಯೂ ಬೆಳೆಸಬೇಕು ಎನ್ನುವ ಚಿಂತನೆಯಿದೆ. ಇದಕ್ಕಾಗಿ ಜವಳಿ ಇಲಾಖೆಯ ಸಹಾಯ ಪಡೆಯಲು ಜವಳಿ ಸಚಿವರ ಜತೆ ಸಭೆ ನಡೆಸಲಾಗುವುದು’ ಎಂದು ಸಚಿವರು ವಿವರಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು. ಈಗ ಇದಕ್ಕೆ ಮುಂದಡಿ ಇಡಲಾಗಿದೆಎಂ.ಬಿ. ಪಾಟೀಲ ಕೈಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.