ADVERTISEMENT

16ನೇ ರಾಜ್ಯ ಹೋಟೆಲು ಸಮ್ಮೇಳನ: ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 10:30 IST
Last Updated 19 ಡಿಸೆಂಬರ್ 2010, 10:30 IST

ಮೈಸೂರು: ‘ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯದ ಮೂರು ಕಡೆ ಪ್ರಾಧಿಕಾರವನ್ನು ರಚಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಶನಿವಾರ ತಿಳಿಸಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ಏರ್ಪಡಿಸಿರುವ ಕರ್ನಾಟಕ ಪ್ರದೇಶ ಹೋಟೆಲುಗಳ ಮತ್ತು  ಉಪಾಹಾರ ಮಂದಿರಗಳ (ಕೆಪಿಎಚ್‌ಆರ್‌ಎ) 16ನೇ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಮೈಸೂರು  ಹೋಟೆಲು ಮಾಲೀಕರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

‘ಪ್ರಾಧಿಕಾರ ರಚನೆಗೆ ಅನುಮತಿ ಪಡೆಯಲು ಮುಂದಿನ ಬಜೆಟ್‌ನಲ್ಲಿ ಚರ್ಚೆ ಮಾಡಲಾಗುವುದು.  ಅಲ್ಲದೆ ಹೋಟೆಲು ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ  ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಮುಖ್ಯಮಂತ್ರಿ ಗಮನಕ್ಕೆ  ತರಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು ವಿಧಾನ ಪರಿಷತ್‌ನಲ್ಲಿ ಚರ್ಚೆ ಆಗಬೇಕಾದರೆ ಹೋಟೆಲ್ ಉದ್ಯಮಿಯೊಬ್ಬರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಅಗತ್ಯವಿದೆ. ಅಲ್ಲದೆ ಮಹಾನಗರಪಾಲಿಕೆ ಇರುವ ಕಡೆ ಒಬ್ಬ ಸದಸ್ಯರು ಇದ್ದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದರು.

ಕ್ಯಾಂಟೀನ್‌ಗಳು ಹೋಟೆಲ್ ಸಂಘಕ್ಕೆ: ‘ಎಲ್ಲ ಜಿಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ಇರುವ ಕ್ಯಾಂಟೀನ್‌ಗಳನ್ನು  ಹೋಟೆಲ್ ಮಾಲೀಕರ ಸಂಘಕ್ಕೆ ಮುಂದೆ ವಹಿಸಲಾಗುವುದು. ಬಡವರು, ಮಧ್ಯಮ ವರ್ಗದವರೇ ಈ  ಆಸ್ಪತ್ರೆಗಳಿಗೆ ಹೆಚ್ಚಾಗಿ ಬರುತ್ತಾರೆ. ಹಾಗಾಗಿ ಹೋಟೆಲ್ ಉದ್ಯಮದವರು ಸೇವಾ ಮನೋಭಾವದಿಂದ  ಕೆಲಸ ಮಾಡಬೇಕು’ ಎಂದರು.

ಸಮ್ಮೇಳನ ಉದ್ಘಾಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ‘ಸಮಾಜದಲ್ಲಿ ಎಲ್ಲವು ಕಲಬೆರಕೆಯಾಗಿದೆ. ಆಹಾರ, ಔಷಧ, ಕಲೆ ಹಾಗೂ ರಾಜಕಾರಣವೂ ಕಲಬೆರಕೆ  ಆಗಿದೆ’ ಎಂದು ಕಳವಳಪಟ್ಟರು.

ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿದ್ದರಾಜು,  ಕೆಪಿಎಚ್‌ಆರ್‌ಎ ಸದಸ್ಯರಾದ ಕೆ.ಎಲ್.ರಾಮನಾಥ್ ಭಟ್, ಕೆ.ರಾಮವಿಠಲದಾಸ್, ರವಿ ಶಾಸ್ತ್ರಿ,  ನಾರಾಯಣ ವಿ.ಹೆಗಡೆ, ಸುಧೀರ್ ನಾಯರ್ ಇದ್ದರು.  ಕೆಪಿಎಚ್‌ಆರ್‌ಎ ಅಧ್ಯಕ್ಷ ಬಾ.ರಾಮಚಂದ್ರ  ಉಪಾದ್ಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಕಾರ್ಯಾಧ್ಯಕ್ಷ ಎಂ. ರಾಜೇಂದ್ರ ಅವರು  ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.