ADVERTISEMENT

ರಸ್ತೆ ಅಪಘಾತ: 3 ವರ್ಷಗಳಲ್ಲಿ 17 ಚಿರತೆ ಬಲಿ, ಕುಣಿಗಲ್ ತಾಲ್ಲೂಕಿನಲ್ಲೇ ಹೆಚ್ಚು

ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ ವನ್ಯಜೀವಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 23 ಡಿಸೆಂಬರ್ 2018, 10:57 IST
Last Updated 23 ಡಿಸೆಂಬರ್ 2018, 10:57 IST
ಕುಣಿಗಲ್ ತಾಲ್ಲೂಕು ನಡೆಮಾವಿನಪುರದ ಬಳಿ ಇತ್ತೀಚೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಚಿರತೆ
ಕುಣಿಗಲ್ ತಾಲ್ಲೂಕು ನಡೆಮಾವಿನಪುರದ ಬಳಿ ಇತ್ತೀಚೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಚಿರತೆ   

ತುಮಕೂರು: ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತೀವ್ರವಾಗುತ್ತಿದೆ. ಆಹಾರ ಅರಸಿ ಚಿರತೆ, ಕರಡಿ, ಜಿಂಕೆಗಳು ಕಾಡಂಚಿನ ಗ್ರಾಮಗಳತ್ತ ಮುಖ ಮಾಡುತ್ತಿವೆ.

ನಾಡಿನತ್ತ ಮುಖಮಾಡಿದ್ದ ವೇಳೆ ಬೇಟೆ, ವಾಹನಗಳು ಡಿಕ್ಕಿ ಹೊಡೆದು ಹಾಗೂ ಇತರ ಕಾರಣಗಳಿಂದ 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ವನ್ಯಜೀವಿಗಳು ಮೃತಪಟ್ಟಿವೆ. ಇದರಲ್ಲಿ 17 ಚಿರತೆಗಳು ಸಾವಿನ ಮನೆ ಸೇರಿವೆ. ಅಪಘಾತದ ಕಾರಣದಿಂದಲೇ ಹೆಚ್ಚು ವನ್ಯ ಜೀವಿಗಳು ಮೃತಪಟ್ಟಿವೆ.

ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 7 ಚಿರತೆಗಳು ಅಪಘಾತಕ್ಕೆ ಬಲಿಯಾಗಿವೆ. ಅರಣ್ಯ ಇಲಾಖೆ ಮಾಹಿತಿಯ ಪ್ರಕಾರ 2016ರಲ್ಲಿ ಅಪಘಾತ ಮತ್ತು ಇತರ ಕಾರಣದಿಂದ 5 ಚಿರತೆಗಳು, ತಲಾ ಒಂದು ಕರಡಿ, ನರಿ ಮತ್ತು ಕೃಷ್ಣಮೃಗಮೃತಪಟ್ಟಿವೆ. 2017ರಲ್ಲಿ 3 ಚಿರತೆ, ಎರಡು ಕೃಷ್ಣಮೃಗ, 2018ರಲ್ಲಿ 9 ಚಿರತೆ, ಮೂರು ಕರಡಿಗಳು ಸಾವನ್ನಪ್ಪಿವೆ.

ADVERTISEMENT

ಜಿಲ್ಲೆಯ ಅರಣ್ಯಗಳಲ್ಲಿ ನರಿ, ಕೃಷ್ಣಮೃಗ, ಪುನುಗು ಬೆಕ್ಕು, ನಕ್ಷತ್ರ ಆಮೆ, ಕರಡಿಗಳು ಹೆಚ್ಚಿವೆ. ಕೆಲವು ಕಡೆಗಳಲ್ಲಿ ಜೀವಿಗಳು ಅಪಘಾತಕ್ಕೆ ಬಲಿಯಾದರೂ ದಾಖಲಾಗುತ್ತಿಲ್ಲ. ಉರುಳಿಗೆ ಬಿದ್ದ ಪ್ರಾಣಿಗಳು ತಪ್ಪಿಸಿಕೊಳ್ಳುವ ಯತ್ನದಲ್ಲಿಯೂ ಸಾವನ್ನಪ್ಪಿವೆ.

ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರ ಅಧ್ಯಯನದ ಪ್ರಕಾರ ಜಿಲ್ಲೆಯ 93 ಗ್ರಾಮಗಳಲ್ಲಿ ಮಾನವ ಮತ್ತು ಚಿರತೆ ಸಂಘರ್ಷ ಇದೆ.

‌ತಿಂಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಎರಡು –ಮೂರು ಕಡೆಗಳಲ್ಲಿಯಾದರೂ ಕುರಿ, ಮೇಕೆಗಳ ಮೇಲೆ ಚಿರತೆ ದಾಳಿ, ಮನುಷ್ಯನ ಮೇಲೆ ಕರಡಿ ದಾಳಿ, ನಾಡಿಗೆ ಬಂದ ಜಿಂಕೆ ಇಂತಹ ಪ್ರಸಂಗಗಳು ವರದಿಯಾಗುತ್ತಲೇ ಇವೆ.

ಈ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಚಿರತೆಗಳು ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿವೆ. ಕುಣಿಗಲ್ ತಾಲ್ಲೂಕಿನಲ್ಲಿಯೇ ಕಳೆದ ಐದು ತಿಂಗಳಲ್ಲಿ 80ಕ್ಕೂ ಹೆಚ್ಚು ದಾಳಿಗಳು ನಡೆದಿವೆ.

ಸೂಚನಾ ಫಲಕ ನಿರ್ಲಕ್ಷ್ಯ

ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸುತ್ತಮುತ್ತ ಬೆಟ್ಟಗುಡ್ಡ ಪ್ರದೇಶಗಳು ಇವೆ. ಈ ವ್ಯಾಪ್ತಿಯಲ್ಲಿ ಚಿರತೆಗಳು ರಾತ್ರಿ ಹಳ್ಳಿಗಳತ್ತ ಮುಖಮಾಡುತ್ತವೆ.

ವಾಹನ ಚಾಲಕರು ವೇಗದ ಮಿತಿ ಅಳವಡಿಸಿಕೊಂಡು ಸಾಗುವಂತೆ ಹೆದ್ದಾರಿ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಜನರು ಈ ಬಗ್ಗೆ ಲಕ್ಷ್ಯವನ್ನೇ ನೀಡುವುದಿಲ್ಲ. ಇದು ಪ್ರಾಣಿಗಳ ಬದುಕಿಗೆ ಕುತ್ತು ತರುತ್ತಿದೆ ಎನ್ನುವರು ಕುಣಿಗಲ್ ವಲಯ ಅರಣ್ಯಾಧಿಕಾರಿ ರವಿ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.