ADVERTISEMENT

ಕ್ವಾರಂಟೈನ್‌ಗೆ ಒಪ್ಪದೆ 19 ಜನ ದೆಹಲಿಗೆ ವಾಪಸ್

ಪ್ರತ್ಯೇಕ ವಾಸಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈಲು ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 14 ಮೇ 2020, 20:03 IST
Last Updated 14 ಮೇ 2020, 20:03 IST
ರೈಲಿನಿಂದ ಇಳಿದ ಪ್ರಯಾಣಿಕರಿಗೆ ಮಾರ್ಗದರ್ಶನ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ –ಪ್ರಜಾವಾಣಿ ಚಿತ್ರಗಳು
ರೈಲಿನಿಂದ ಇಳಿದ ಪ್ರಯಾಣಿಕರಿಗೆ ಮಾರ್ಗದರ್ಶನ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನವದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರನ್ನು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ 19 ಮಂದಿಯನ್ನು ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

ಮಂಗಳವಾರ ರಾತ್ರಿ ನವದೆಹಲಿಯಿಂದ ಹೊರಟ ವಿಶೇಷ ರೈಲಿನಲ್ಲಿ 920ಮಂದಿ ಪ್ರಯಾಣ ಆರಂಭಿಸಿದರು. ಭೋಪಾಲ್, ನಾಗ್ಪುರ, ಸಿಕಂದರಾಬಾದ್, ಗುಂತಕಲ್, ಅನಂತಪುರದಲ್ಲಿ ರೈಲು ನಿಲುಗಡೆ ಇದ್ದ ಕಾರಣ ಹಲವರು ಅಲ್ಲಿ ಇಳಿದಿದ್ದು, 543 ಮಂದಿ ಮಾತ್ರ ಬೆಂಗ
ಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಗುರುವಾರ ಬೆಳಿಗ್ಗೆ ಬಂದರು.

ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. 90 ಹೋಟೆಲ್‌ಗಳನ್ನು ಕಾಯ್ದಿರಿಸಿದ್ದರು. ಬಿಬಿಎಂಪಿಯ 10 ತಂಡ ಆರೋಗ್ಯ ತಪಾಸಣೆ ನಡೆಸಲು ಸಜ್ಜಾಗಿತ್ತು. ಪ್ರಯಾಣಿಕರನ್ನು ಹೋಟೆಲ್‌ಗಳಿಗೆ ತಲುಪಿಸಲು ಬಿಎಂಟಿಸಿ ಬಸ್‌ಗಳು ಕೂಡ ಸಿದ್ಧವಾಗಿ ನಿಂತಿದ್ದವು.

ADVERTISEMENT

ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿ ಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಆರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿ ಸಿದ 100ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ ಒಳಪಡಲು ನಿರಾಕರಿಸಿದರು. ‘ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಬೇಕು ಎಂಬ ಮಾಹಿತಿ ಇಲ್ಲದ ಕಾರಣ ಬೆಂಗಳೂರಿಗೆ ಬಂದಿದ್ದೇವೆ. ಮೊದಲೇ ಮಾಹಿತಿ ನೀಡಿದ್ದರೆ ಬರುತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಷ್ಟದ ಕಾರಣ ಹುಟ್ಟೂರಿಗೆ ಬಂದಿದ್ದೇವೆ. ಈಗ ಹಣ ಕೊಟ್ಟು ಕ್ವಾರಂಟೈನ್‌ನಲ್ಲಿ ಇರಬೇಕು ಎಂದರೆ ಏನು ಮಾಡ
ಬೇಕು’ ಎಂದು ಹಲವರು ಕಣ್ಣೀರು ಹಾಕಿದರು. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.

‘ಗರ್ಭಿಣಿ ಸೊಸೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನೋಡಿಕೊಂಡು ಹೋಗಲು ಬಂದಿದ್ದೇನೆ. ಕ್ವಾರಂಟೈನ್‌ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ಬರುತ್ತಿರಲಿಲ್ಲ’ ಎಂದು ಕಾರ್ತಿಕ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಕಾರಣಕ್ಕೂ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ’ ಎಂದು ಹಲವರು ಪಟ್ಟು ಹಿಡಿದರು. ಮನವೊಲಿಸಲು ಅಧಿಕಾರಿಗಳು ದಿನವಿಡೀ ಹರಸಾಹಸಪಟ್ಟರು. ಬಳಿಕ ಬಹುತೇಕರು ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.