ADVERTISEMENT

2ನೇ ಹಂತದ ಜಿಲ್ಲಾ ಪಂಚಾಯಿತಿ ಚುನಾವಣೆ : ಶೇ 63 ಮತದಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 9:20 IST
Last Updated 1 ಜನವರಿ 2011, 9:20 IST

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಕಲ್ಲು ತೂರಾಟ, ಲಾಠಿ ಪ್ರಹಾರ, ಮೂಲಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ, ಮತಯಂತ್ರಗಳ ದೋಷ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ವರ್ಷದ ಕೊನೆಯ ದಿನ ನಡೆದ ಎರಡನೇ ಹಂತದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಯಿತು.

ಮೈಸೂರು, ಮಂಡ್ಯ, ಬೆಳಗಾವಿ ಸೇರಿದಂತೆ 17 ಜಿಲ್ಲೆಗಳ 595 ಜಿಲ್ಲಾ ಪಂಚಾಯಿತಿ ಮತ್ತು 2163 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ವರದಿಗಳ ಪ್ರಕಾರ ಸರಾಸರಿ ಶೇ 63ರಷ್ಟು ಮತದಾನವಾಗಿದೆ.

ಶನಿವಾರ ಅಂತಿಮ ಚಿತ್ರಣ ದೊರೆಯಲಿದ್ದು, ಒಟ್ಟಾರೆ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕೋನಹಳ್ಳಿ ಮತದಾನ ಕೇಂದ್ರಕ್ಕೆ ಶುಕ್ರವಾರ ನಸುಕಿನಲ್ಲಿ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಮತಯಂತ್ರವನ್ನು ಕಸಿದುಕೊಂಡು ಹೋಗಿ ಸಮೀಪದ ಬಾವಿಗೆ ಎಸೆದು ಪರಾರಿಯಾದ ಘಟನೆ ನಡೆದಿದೆ. ಮತಯಂತ್ರಗಳನ್ನು ರಕ್ಷಿಸಲು ವಿಫಲರಾಗಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮತಗಟ್ಟೆಯ ಐದು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸಿಂದಗಿ ತಾಲ್ಲೂಕಿನ ಚಾಂದಕವಠೆ ಗ್ರಾಮದ ಮತಗಟ್ಟೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮತಗಟ್ಟೆಯ ಬಾಗಿಲು ಮುರಿದು ಮತಯಂತ್ರವೊಂದನ್ನು ಹೊರಗೆ ತಂದು ಧ್ವಂಸಗೊಳಿಸಿದರು. ಮತಯಂತ್ರವು ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದ್ದು. ಜನವರಿ 3ರಂದು ಈ ಮತಗಟ್ಟೆಯಲ್ಲಿ ಮರು ಮತದಾನ ನಡೆಸಲಾಗುವುದು ಎಂದು ತಹಸೀಲ್ದಾರ್ ಶಿವಾನಂದ ಭಜಂತ್ರಿ ತಿಳಿಸಿದರು.

ಧಾರವಾಡ ತಾಲೂಕಿನ ಗರಗ ಕ್ಷೇತ್ರದಲ್ಲಿ ಲಘು ಲಾಠಿ ಪ್ರಹಾರ ನಡೆದಿದೆ. ಮತಗಟ್ಟೆಗೆ ತೆರಳಲು ನೂಕುನುಗ್ಗಲು ಉಂಟಾದಾಗ ಅದನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.  ಹಾವೇರಿ ತಾಲೂಕಿನಬೆಂಚಿಹಳ್ಳಿಯಲ್ಲಿನ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದರು. ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿಯಲ್ಲಿ ಕಲ್ಲು ತೂರಾಟ, ಮಾತಿನ ಚಕಮಕಿ, ಮತಯಂತ್ರಗಳ ದುರಸ್ತಿ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮುಗಳಖೋಡ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕಪ್ಪಲಗುದ್ದಿ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಘರ್ಷಣೆಗಿಳಿದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.