ADVERTISEMENT

ಬೆಳಗಾವಿ| ಝೈಡಸ್ ಕ್ಯಾಡಿಲಾ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ಗೆ ಒಳಗಾದ 20 ಮಕ್ಕಳು

​ಪ್ರಜಾವಾಣಿ ವಾರ್ತೆ
Published 20 ಮೇ 2021, 2:26 IST
Last Updated 20 ಮೇ 2021, 2:26 IST
ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’  ಲಸಿಕೆ (ಎಎಫ್‌ಪಿ ಚಿತ್ರ)
ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’ ಲಸಿಕೆ (ಎಎಫ್‌ಪಿ ಚಿತ್ರ)    

ಬೆಳಗಾವಿ: ಕೋವ್ಯಾಕ್ಸಿನ್ ಕ್ಲಿನಿಕಲ್‌ ಟ್ರಯಲ್ ನಡೆಸಿದ್ದ ಇಲ್ಲಿನ ಜೀವನ್‌ರೇಖಾ ಆಸ್ಪತ್ರೆಯು ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗಿದೆ. 12ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಸುತ್ತಿರುವುದು ವಿಶೇಷ.

ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ‘ಪ್ರಜಾವಾಣಿ’ಗೆ ಈ ವಿಷಯ ತಿಳಿಸಿದರು.

‘ಬೆಳಗಾವಿಯವರೇ ಆದ ತಲಾ 10 ಹುಡುಗ ಹಾಗೂ ಹುಡುಗಿಯರನ್ನು ಸ್ವಯಂಸೇವಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಮೊದಲ ಡೋಸ್ ನೀಡಲಾಗಿದೆ. ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. 28ನೇ ದಿನಕ್ಕೆ 2ನೇ ಹಾಗೂ 52ನೇ ದಿನಕ್ಕೆ 3ನೇ ಡೋಸ್ ಕೊಡಲಾಗುವುದು. ಪ್ರಸ್ತುತ 2ನೇ ಡೋಸ್ ನೀಡುವಿಕೆ ಪ್ರಗತಿಯಲ್ಲಿದೆ. ಪ್ರತಿ ಡೋಸ್ ನೀಡಿದ ಬಳಿಕವೂ ಅವರಲ್ಲಿನ ರೋಗ ನಿರೋಧಕ ಶಕ್ತಿ ಪರೀಕ್ಷಿಸುವುದಕ್ಕಾಗಿ ರಕ್ತದ ಮಾದರಿ ಸಂಗ್ರಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಲಸಿಕಾಕರಣಕ್ಕಾಗಿ ಟ್ರಯಲ್ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ದೇಶದ ವಿವಿಧೆಡೆ ನಡೆಯುತ್ತಿರುವ ಪ್ರಯೋಗದಲ್ಲಿ 1,700 ಸ್ವಯಂ ಸೇವಕರು ಕರ್ನಾಟಕದವರೇ ಆಗಿದ್ದಾರೆ. ಇವರಲ್ಲಿ 20 ಮಕ್ಕಳಿದ್ದು, ಅವರೆಲ್ಲರೂ ಬೆಳಗಾವಿಯವರೇ ಆಗಿರುವುದು ವಿಶೇಷ.

ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ವನ್ನು ಮಕ್ಕಳ ಮೇಲೆ ನಡೆಸಲು ಉದ್ದೇಶಿಸಲಾಗಿದ್ದು, ಅದರಲ್ಲೂ ಪಾಲ್ಗೊಳ್ಳುವುದಕ್ಕಾಗಿ ಜೀವನ್‌ರೇಖಾ ಆಸ್ಪತ್ರೆಯು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.