ಬೆಂಗಳೂರು: ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,000 ಮೆಗಾ ವಾಟ್ ಅಧಿಕ ಇದೆ. ವಿದ್ಯುತ್ ಕೊರತೆ ಆಗದಂತೆ ಉತ್ತರ ಪ್ರದೇಶ, ಪಂಜಾಬ್‌ನಿಂದ ವಿನಿಮಯ ಆಧಾರದಲ್ಲಿ ವಿದ್ಯುತ್ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಕಡಿತ(ಲೋಡ್ ಶೆಡ್ಡಿಂಗ್) ಇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.
ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಪಂಜಾಬ್‌ನಿಂದ 300 ಮೆ.ವ್ಯಾ. ಹಾಗೂ ಉತ್ತರ ಪ್ರದೇಶದಿಂದ 100 ಮೆ.ವ್ಯಾ.ದಿಂದ 1,200ವರೆಗೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪಡೆಯಲಾಗುವುದು. ಇದು ಬೇಸಿಗೆಯ ಮೂರು ತಿಂಗಳಿಗೆ ಅಷ್ಟೇ ಇರಲಿದ್ದು, ಒಪ್ಪಂದದಂತೆ ಬೇಸಿಗೆ ಮುಗಿದ ಬಳಿಕ ನಾವು ಆ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕಾಗುತ್ತದೆ. ಇದಲ್ಲದೇ ಜೂನ್ ಮೊದಲ ವಾರದವರೆಗೆ ನಿತ್ಯ 1,000 ಮೆ.ವ್ಯಾ. ವಿದ್ಯುತ್ ಖರೀದಿಸಲಾಗುವುದು’ ಎಂದು ಹೇಳಿದರು.
ಬೇಸಿಗೆಯಲ್ಲಿ ರೈತರ ಕೃಷಿ ನೀರಾವರಿ ಪಂಪ್ ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ಮತ್ತು ಇತರ ಉದ್ದೇಶಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆ ಇರುವಷ್ಟು ವಿದ್ಯುತ್ ಇದೆ ಎಂದು ವಿವರ ನೀಡಿದರು.
ಸಂಗ್ರಹ: ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆದರೂ ಸಂಗ್ರಹ ಮಾಡಿ ಇಟ್ಟುಕೊಳ್ಳುವ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್ ಸ್ಟೋರೇಜ್ ಮೂಲಕ 2,000 ಮೆಗಾ ವಾಟ್, ವಾರಾಹಿ ಪಂಪ್ಡ್ ಸ್ಟೋರೇಜ್ ಮೂಲಕ 1,600 ಮೆಗಾ ವಾಟ್, ಪಾವಗಡದಲ್ಲಿ 1,000 ಮೆಗಾ ವಾಟ್ ಸಾಮರ್ಥ್ಯ ಹಾಗೂ ರ‍್ಯಾಪ್ಟೆಯಲ್ಲಿ 2,000 ಮೆ.ವ್ಯಾ. ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬಹುದು ಎಂದರು.
ರಾಜ್ಯದ ಕೆಲವು ಸಬ್ ಸ್ಟೇಷನ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಅತಿ ಹೊರೆ (ಓವರ್ ಲೋಡ್) ಆಗುತ್ತಿದೆ. ಕೆಲವು ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಕಡಿಮೆ ಹೊರೆ ಇರುವ ಉಪ ಕೇಂದ್ರಗಳಿಂದ ಅತಿ ಹೊರೆ ಇರುವ ಉಪ ಕೇಂದ್ರಗಳಿಗೆ ವಿದ್ಯುತ್ ಒದಗಿಸಲು ಜಾಲ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ವಿದ್ಯುತ್ ಲಭ್ಯವಿದ್ದರೂ ವಿತರಣೆಯೇ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು ಉಪ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಈ ವರ್ಷ 100 ಹೊಸ ಉಪ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಕಳೆದ ವರ್ಷ ಫೆ. 27ರಂದು 16214 ಮೆ.ವ್ಯಾ. ಬೇಡಿಕೆ ಇತ್ತು ಈ ವರ್ಷ ಅದೇ ದಿನ 17874 ಮೆ.ವ್ಯಾ. ಬೇಡಿಕೆ ಬಂದಿತ್ತು. ಪೂರೈಕೆಯಲ್ಲಿ ಕೊರತೆಯಾಗಿಲ್ಲ. ಜೂನ್‌ವರೆಗೆ ಸಮಸ್ಯೆ ಇರುವುದಿಲ್ಲ.ಗೌರವ್ ಗುಪ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇಂಧನ ಇಲಾಖೆ
ಗೃಹ ಬಳಕೆಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಬೇಕು ಎಂಬ ಉದ್ದೇಶದಿಂದ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ನಿರಂತರ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ರೈತರು ಕನ್ವರ್ಟರ್‌ಗಳನ್ನು ಅಳವಡಿಸಿ ಕೃಷಿ ಪಂಪ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ‘ಟ್ರಿಪ್’ ಆಗಿ ಇಡೀ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನರು ತೊಂದರೆಗೊಳಗಾಗುತ್ತಾರೆ. ಈ ರೀತಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.