ADVERTISEMENT

ರಾಜ್ಯದಲ್ಲಿದ್ದಾರೆ 2,264 ಕ್ಷಯ ರೋಗಿಗಳು!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 16:28 IST
Last Updated 2 ಆಗಸ್ಟ್ 2018, 16:28 IST

ಬೆಂಗಳೂರು: ರಾಜ್ಯದಲ್ಲಿ ಒಟ್ಟು 2,264 ಕ್ಷಯ ರೋಗಿಗಳು ಇದ್ದಾರೆ ಎಂಬುದು ಆರೋಗ್ಯ ಇಲಾಖೆಯ ಎರಡನೇ ಹಂತದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

‘ಅಪಾಯಕಾರಿ ವಲಯಗಳಲ್ಲಿ ವಾಸವಿರುವ ರಾಜ್ಯದ 1 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಜುಲೈ 2ರಿಂದ 13ರವರೆಗೆ ಮನೆ, ಮನೆಗೆ ತೆರಳಿ ಅವರ ಕಫ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪತ್ತೆ ಹಚ್ಚಲಾಗಿದೆ’ ಎಂದು ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಸಂಜಯ್ ಕಾಂತ್ ಹೇಳಿದರು.

ಬಳ್ಳಾರಿಯಲ್ಲಿ 250 ಕ್ಷಯರೋಗಿಗಳು ಇದ್ದಾರೆ. ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚು. ಕೊಡಗು ಜಿಲ್ಲೆಯಲ್ಲಿ ಕೇವಲ 11 ಕ್ಷಯ ರೋಗಿಗಳು ಮಾತ್ರ ಪತ್ತೆಯಾಗಿದ್ದಾರೆ.

ADVERTISEMENT

‘ಜನಸಂಖ್ಯೆ ಹೆಚ್ಚಿರುವ ಕಡೆಗೆ ಕ್ಷಯರೋಗಿಗಳು ಹೆಚ್ಚು ಪತ್ತೆಯಾಗಿದ್ದಾರೆ. ಈ ಪ್ರದೇಶಗಳಲ್ಲಿ ಎಚ್‌ಐವಿ ರೋಗಿಗಳು ಕೂಡ ಹೆಚ್ಚಿದ್ದಾರೆ. ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದೆ’ ಎಂದು ಅವರು ಮಾಹಿತಿ ನೀಡಿದರು.

2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿದೆ.

ಯಾವುದು ಅಪಾಯಕಾರಿ ವಲಯ?
ಕ್ಷಯ ರೋಗ ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರಡುವ ಕಾಯಿಲೆ ಆದ್ದರಿಂದ ಹೆಚ್ಚು ನಿಗಾ ವಹಿಸುವ ಅಗತ್ಯ ಇದೆ. ನಗರದ ಕೊಳೆಗೇರಿಗಳು, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ಕಾರ್ಮಿಕರು, ರಕ್ಷಣಾ ವಲಯಗಳು, ಅನಾಥರು, ಅಪೌಷ್ಠಿಕತೆ ಹೊಂದಿರುವವರು, ನೇಕಾರರು, ಗುಡ್ಡಗಾಡು, ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವವರನ್ನು ಅಪಾಯಕಾರಿ ವಲಯಗಳು ಎಂದು ಗುರುತಿಸಿ ಸಮೀಕ್ಷೆ ಮಾಡಲಾಗಿದೆ.

ವಿವಿಧ ಜಿಲ್ಲೆಗಳಲ್ಲಿರುವ ಕ್ಷಯರೋಗಿಗಳು
250: ಬಳ್ಳಾರಿ
200: ವಿಜಯಪುರ
209: ಕೊಪ್ಪಳ
160: ಬೆಂಗಳೂರು
11: ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.