ADVERTISEMENT

ಅಪಾಯದಲ್ಲಿ 2,562 ಕೋವಿಡ್‌–19 ಸೋಂಕಿತರು

ಜೊತೆಗೆ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:31 IST
Last Updated 5 ಜುಲೈ 2020, 19:31 IST
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ನಿರ್ಮಿಸಲಾಗಿರುವ 10,100 ಹಾಸಿಗೆಗಳು ಇರುವ ತಾತ್ಕಾಲಿಕ ಕೋವಿಡ್‌–19 ಆರೈಕೆ ಕೇಂದ್ರ –ಪ್ರಜಾವಾಣಿ ಚಿತ್ರ
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ನಿರ್ಮಿಸಲಾಗಿರುವ 10,100 ಹಾಸಿಗೆಗಳು ಇರುವ ತಾತ್ಕಾಲಿಕ ಕೋವಿಡ್‌–19 ಆರೈಕೆ ಕೇಂದ್ರ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರಲ್ಲಿ 2,562 ರೋಗಿಗಳು ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳು ಹಾಗೂ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಏರಿಕೆ ಕಂಡಿದೆ. ಒಂದು ವಾರದಲ್ಲೇ 9,627 ಮಂದಿ ಸೋಂಕಿತರಾಗಿ ವಿವಿಧ ಆಸ್ಪತ್ರೆಗಳನ್ನು ಸೇರಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಹೆಚ್ಚಿನ ಕೋವಿಡ್‌ ಆಸ್ಪತ್ರೆಗಳು ಭರ್ತಿಯಾಗಿವೆ. ಸೋಂಕು ಲಕ್ಷಣಗಳು ಗೋಚರಿಸದ ಹಾಗೂ‍ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳನ್ನು ಕೋವಿಡ್‌ ಆಸ್ಪತ್ರೆಗಳಿಂದ ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದೇ ವೇಳೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಅಪಾಯದ ಸ್ಥಿತಿ ಎದುರಿಸುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮರಣದ ಪ್ರಮಾಣ ಶೇ 1.5ಕ್ಕೆ ತಲುಪಿದೆ. ಮೃತಪಟ್ಟವರಲ್ಲಿಬಹುತೇಕರು ಹೃದಯ ಕಾಯಿಲೆ, ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು, ಬಹು ಅಂಗಾಂಗ ವೈಫಲ್ಯ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ರಾಜ್ಯದಲ್ಲಿ ಈವರೆಗೆ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ ಶೇ 50 ರಷ್ಟು ಮಂದಿ ಮಧ್ಯ ವಯಸ್ಕರೇ ಆಗಿದ್ದಾರೆ. 20ರಿಂದ 40 ವರ್ಷದೊಳಗಿನ 10 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿ ಆಸ್ಪತ್ರೆಗಳನ್ನು ಸೇರಿದ್ದಾರೆ.

ADVERTISEMENT

12 ದಿನಗಳಲ್ಲೇ ಗುಣಮುಖ:ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರಲ್ಲಿ ಶೇ 43 ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಅವಧಿ ಸರಾಸರಿ13.5 ದಿನಗಳಿಂದ 12.1 ದಿನಗಳಿಗೆ ಇಳಿಕೆಯಾಗಿದೆ. ರೋಗ ಲಕ್ಷಣಗಳು ಬಹಿರಂಗವಾಗಿ ಗೋಚರಿಸದರೋಗಿಗಳು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವರು ಏಳು ದಿನಗಳಲ್ಲಿಯೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದು, ಕೆಲವರು 20 ದಿನಗಳಿಗೂ ಅಧಿಕ ಅವಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈವರೆಗೆ ಮೃತಪಟ್ಟವರು ಸರಾಸರಿ 4.9 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

ಕೋವಿಡ್ ಪ್ರಕರಣಗಳ ವಿವರ (ಜು.4)

ವಯಸ್ಸು ಸೋಂಕಿತರು
0–10 1,453
10–20 2,180
20–40 10,057
40–60 5,951
60 ವರ್ಷ ಮೇಲ್ಪಟ್ಟು 1,919

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.