ADVERTISEMENT

27ರಂದು ಜನಪ್ರತಿನಿಧಿಗಳ ಸಭೆ

ಹೈ.ಕ ವಿಶೇಷ ಸ್ಥಾನಮಾನ: ನಿಯಮ ರೂಪಿಸುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಬೆಂಗಳೂರು: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಿದ್ದು, ಅದಕ್ಕೆ ಪೂರಕವಾಗಿ ನಿಯಮ ರೂಪಿಸುವುದಕ್ಕೂ ಮುನ್ನ ಆ ಭಾಗದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸಚಿವ ಸಂಪುಟದ ಉಪ ಸಮಿತಿ ನಿರ್ಧರಿಸಿದೆ.

ತಿದ್ದುಪಡಿ ಪ್ರಕಾರ ನಿಯಮ ರೂಪಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಈ ಸಲುವಾಗಿ ಎಚ್.ಕೆ.ಪಾಟೀಲ್ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಯಿತು. ಅದು ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಹೈದರಾಬಾದ್ ಕರ್ನಾಟಕ ಭಾಗದ ಸಂಸದರು ಮತ್ತು ಶಾಸಕರ ಸಭೆಯನ್ನು ಇದೇ 27 ಮತ್ತು 28ರಂದು ನಗರದಲ್ಲಿ ನಡೆಸಲಾಗುವುದು. ಜುಲೈ 2ರಂದು ಗುಲ್ಬರ್ಗ ಮತ್ತು 3ರಂದು ಹೊಸಪೇಟೆಯಲ್ಲಿ ಆ ಭಾಗದ ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಸಚಿವ ಪಾಟೀಲ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಅಭಿಪ್ರಾಯ ಸಂಗ್ರಹಿಸಿದ ನಂತರ ಜುಲೈ 7 ಮತ್ತು 8ರಂದು ಸಂಪುಟ ಉಪ ಸಮಿತಿ ಸಭೆ ಸೇರಿ ವರದಿಯನ್ನು ಅಂತಿಮಗೊಳಿಸಲಿದೆ. ಜುಲೈ11ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು. ಅದರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಇತ್ಯಾದಿ ವಿಷಯಗಳ ಬಗ್ಗೆಯೂ ಪ್ರಸ್ತಾಪ ಇರುತ್ತದೆ ಎಂದು ಅವರು ಹೇಳಿದರು.

ನಿಯಮ ಜಾರಿಯಾಗುವುದಕ್ಕೂ ಮುನ್ನ ರಾಷ್ಟ್ರಪತಿಗಳ ಅಂಕಿತ ಬೇಕಾಗುತ್ತದೆ. ಈ ಕಾರಣಕ್ಕೆ ಕರಡು ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಳಿಕ ಅದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಸಲ್ಲಿಸಲಾಗುತ್ತದೆ ಎಂದರು. `ಸಂವಿಧಾನ ತಿದ್ದುಪಡಿ ಪ್ರಕಾರ ಕಾರ್ಯನಿರ್ವಹಣೆಯ ಪೂರ್ಣ ಜವಾಬ್ದಾರಿಯನ್ನು ರಾಜ್ಯಪಾಲರಿಗೆ ನೀಡಿದ್ದು, ಅದನ್ನು ನಿಮ್ಮ ಸರ್ಕಾರ ಒಪ್ಪುತ್ತದೆಯೇ' ಎಂದು ಕೇಳಿದ ಪ್ರಶ್ನೆಗೆ `ವರದಿ ಸಿದ್ಧಪಡಿಸಿದ ನಂತರ ಎಲ್ಲವೂ ಬಹಿರಂಗವಾಗಲಿದೆ' ಎಂದು ಹೇಳಿದರು.
ಆಗಸ್ಟ್ ಮೊದಲ ವಾರದೊಳಗೆ ವಿಶೇಷ ಸ್ಥಾನಮಾನದ ಅಧಿಸೂಚನೆ ಹೊರಬೀಳಲಿದೆ. ಅಲ್ಲಿಯವರೆಗೂ ನಿಯಮ ರೂಪಿಸುವ ಕೆಲಸ ನಡೆಯಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.