ADVERTISEMENT

28ರಿಂದ ಅಂತರರಾಷ್ಟ್ರೀಯ ಚಿತ್ರೋತ್ಸವ

ಈ ಬಾರಿ ಮೈಸೂರಿನಲ್ಲೂ ಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2016, 19:46 IST
Last Updated 5 ಜನವರಿ 2016, 19:46 IST

ಬೆಂಗಳೂರು: ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಜ. 28ರಿಂದ ಫೆ. 4ರವರೆಗೆ ನಡೆಯಲಿದ್ದು, ಈ ಬಾರಿ ಮೈಸೂರಿನ ಚಿತ್ರಪ್ರೇಮಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸಿನಿಮಾ ವೀಕ್ಷಣೆಗೆ ಅವಕಾಶ ಸಿಗಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಜತೆಗೆ ಮೈಸೂರಿನಲ್ಲೂ ಚಿತ್ರ ಪ್ರದರ್ಶನ ನಡೆಯಲಿದ್ದು, ಎರಡೂ ನಗರಗಳಲ್ಲಿ ಒಂದೇ ಕಡೆ ಚಿತ್ರೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್‌. ರೋಷನ್‌ ಬೇಗ್, ‘ಜ. 28ರಂದು ವಿಧಾನಸೌಧದ ಪೂರ್ವದ್ವಾರದಲ್ಲಿ ಚಿತ್ರೋತ್ಸವ ಉದ್ಘಾಟನೆಯಾಗಲಿದ್ದು, ಫೆ. 4ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಬಾರಿಯ ಸಿನಿಮೋತ್ಸವ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ’ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಸಿನಿಮೋತ್ಸವದ ವಿವರ ನೀಡಿ, 61 ದೇಶಗಳ 170 ಚಿತ್ರಗಳು ಪ್ರದರ್ಶನವಾಗಲಿವೆ. ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಏಷ್ಯಾ ವಿಭಾಗದಲ್ಲಿ 12, ಭಾರತೀಯ ವಿಭಾಗದಲ್ಲಿ 13 ಹಾಗೂ ಕನ್ನಡದಲ್ಲಿ 15 ಸಿನಿಮಾ ಪಾಲ್ಗೊಳ್ಳಲಿವೆ. ಈ ಬಾರಿ ಬಹುಮಾನದ ಮೊತ್ತವನ್ನು ₹11 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ ಪಿವಿಆರ್‌ ಸಿನಿಮಾದ 11 ಹಾಗೂ ಮೈಸೂರಿನ ಐನಾಕ್ಸ್‌ ಚಿತ್ರಮಂದಿರದ 4 ತೆರೆಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಬರ್ಲಿನ್, ಟೊರೆಂಟೊ, ಗೋವಾ ಇನ್ನಿತರ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಇದರ ಜತೆಗೆ ಅಂತರರಾಷ್ಟ್ರೀಯ ಖ್ಯಾತಿ ಪಡೆದ ನಿರ್ದೇಶಕರಾದ ಇರಾನ್‌ನ ಜಾಫರ್‌ ಪಹಾನಿ, ಚೀನಾದ ಜಿಯಾ ಝಾಂಗ್‌, ಜಪಾನ್‌ನ ಹೋ ಸಿಯಾವೊ ಸಿಯೆನ್, ಟರ್ಕಿಯ ಯಮಿನ್ ಆಲ್ಫರ್, ಫ್ರಾನ್ಸ್‌ನ ಜಾಕ್ಸ್‌ ಆಡಿಯಾರ್ಡ್‌, ಇಟಲಿಯ ನಾನ್ ಮೊರೆಟ್ಟಿ ಅವರ ಸಿನಿಮಾಗಳೂ ಪ್ರದರ್ಶನವಾಗಲಿವೆ ಎಂದು ಬಾಬು ವಿವರಿಸಿದರು.

ಸಂಘಟನಾ ಸಮಿತಿ ಸದಸ್ಯ ಹಾಗೂ ನಿರ್ದೇಶಕ ಗಿರೀಶ ಕಾಸರವಳ್ಳಿ, ‘ಸಿನಿಮಾಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು ಹಾಗೂ ಸಂವಾದದಲ್ಲಿ ಜಾಗತಿಕ ಚಿತ್ರರಂಗದ ದಿಗ್ಗಜರು ಭಾಗವಹಿಸಲಿದ್ದಾರೆ. ಚಿತ್ರ ನಿರ್ಮಾಣದ ಪ್ರಮುಖ ಭಾಗವಾಗಿರುವ ತಾಂತ್ರಿಕ ಕಾರ್ಯಗಳ ಕುರಿತು ಅವರು ಅನುಭವ ಹಂಚಿಕೊಳ್ಳಲಿದ್ದಾರೆ’ ಎಂದರು.

ಫೆ. 4ರಂದು ಚಿತ್ರೋದ್ಯಮದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಕಲಾವಿದರು ಹಾಗೂ ತಂತ್ರಜ್ಞರು ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು.

ಸಿನಿಮೋತ್ಸವದ ಕಲಾ ನಿರ್ದೇಶಕಿ ಜಯಮಾಲಾ, ಕಾರ್ಯಕಾರಿ ಕಲಾ ನಿರ್ದೇಶಕ ವಿದ್ಯಾ ಶಂಕರ್, ಸಲಹೆಗಾರ ಶಂಕರ ಮೋಹನ್, ವಾರ್ತಾ ಇಲಾಖೆ ಕಾರ್ಯದರ್ಶಿ ಡಾ. ಎನ್‌.ಎಸ್‌.ಚೆನ್ನಪ್ಪಗೌಡ, ನಿರ್ದೇಶಕ ಎನ್‌.ಆರ್‌.ವಿಶುಕುಮಾರ್ ಉಪಸ್ಥಿತರಿದ್ದರು.

ನೋಂದಣಿ: ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳನ್ನು ನೋಡಬಯಸುವವರು ಅಕಾಡೆಮಿಯ ಕಾರ್ಯಾಲಯ, ಸುಚಿತ್ರ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮೈಸೂರಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿನಿಧಿ ಶುಲ್ಕ ₹ 600; ವಿದ್ಯಾರ್ಥಿ ಮತ್ತು ಚಿತ್ರೋದ್ಯಮದವರಿಗೆ ₹ 300.
*

ಸಿನಿಮೋತ್ಸವದ ವೈಶಿಷ್ಟ್ಯ
*ಮೆಕ್ಸಿಕೋ, ಇರಾನ್, ಟರ್ಕಿ ಚಿತ್ರಗಳ ವಿಶೇಷ ಅವಲೋಕನ

*ಖ್ಯಾತ ನಿರ್ದೇಶಕ ಹಂಗೆರಿಯ ಇಸ್ಟ್ವಾನ್‌ ಝೆಬೋ ಹಾಗೂ ಡೆನ್ಮಾರ್ಕ್‌ನ ನಿಲ್ಸ್‌ ಮ್ಯಾಲ್ಮರೋಸ್ ಅವರ ಚಿತ್ರ ಪ್ರದರ್ಶನಕ್ಕೆ ಒತ್ತು
*‘ಕಲಾವಿದರ ಸಿಂಹಾವಲೋಕನ’ದಲ್ಲಿ ಪಂಚಭಾಷಾ ತಾರೆ ಬಿ. ಸರೋಜಾದೇವಿ ಚಿತ್ರಗಳ ಪ್ರದರ್ಶನ
*ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಚಿತ್ರ ಪ್ರದರ್ಶನದಲ್ಲಿ ಮೃಣಾಲ್ ಸೇನ್ ಹಾಗೂ ಅಡೂರು ಗೋಪಾಲಕೃಷ್ಣನ್ ಸಿನಿಮಾ ಪ್ರದರ್ಶನ
*ಕನ್ನಡದ ಚಿತ್ರ ನಿರ್ದೇಶಕರಾದ ಸಿದ್ಧಲಿಂಗಯ್ಯ ಹಾಗೂ ಕೆ.ಎಸ್‌.ಎಲ್‌.ಸ್ವಾಮಿ (ರವೀ) ಸ್ಮರಣೆಯಲ್ಲಿ ಅವರ ಚಿತ್ರ ಪ್ರದರ್ಶನ
*ಬರ ಹಾಗೂ ರೈತರ ಸಮಸ್ಯೆ ಕುರಿತಂತೆ ದೇಶ ವಿದೇಶಗಳ ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ
 
*
ಬೆಂಗಳೂರು ಸಿನಿಮೋತ್ಸವಕ್ಕೆ ಶಾಶ್ವತ ಸ್ಥಳ
ಬೆಂಗಳೂರು:
ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಬೆಂಗಳೂರು ಸಿನಿಮೋತ್ಸವ’ ತನ್ನ ವೈಶಿಷ್ಟ್ಯ ಹೆಚ್ಚಿಸಿಕೊಳ್ಳುತ್ತಿದ್ದು, ಚಿತ್ರ ಪ್ರದರ್ಶನಕ್ಕೆ ಶಾಶ್ವತ ಸ್ಥಳ ಒದಗಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದ ಪಕ್ಕದಲ್ಲಿ ಮಲ್ಟಿಪ್ಲೆಕ್ಸ್‌ ನಿರ್ಮಿಸಿ ಅಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.

ಮಂಗಳವಾರ ಇಲ್ಲಿ ಈ ವಿಷಯ ತಿಳಿಸಿದ ವಾರ್ತಾ ಸಚಿವ ಆರ್‌.ರೋಷನ್ ಬೇಗ್, ‘ಪ್ರತಿ ಬಾರಿ ಸಿನಿಮೋತ್ಸವದ ಸಂದರ್ಭದಲ್ಲಿ ಹಲವು ಚಿತ್ರಮಂದಿರಗಳನ್ನು ಪಡೆಯಲು ನಡೆಸುವ ಪರದಾಟ ಇದರಿಂದ ಕೊನೆಯಾಗಲಿದೆ’ ಎಂದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ನಿರ್ಮಾಣವಾಗಲಿರುವ ಸಮಾವೇಶ ಕೇಂದ್ರದ ಸಮೀಪ ಮಲ್ಟಿಪ್ಲೆಕ್ಸ್‌ ನಿರ್ಮಿಸಲಾಗುವುದು. ವರ್ಷದ 11 ತಿಂಗಳು ಬೇರೆ ಚಿತ್ರಗಳ ಪ್ರದರ್ಶನ ನಡೆದರೆ, ಒಂದು ತಿಂಗಳ ಕಾಲ ಅದನ್ನು ಸಿನಿಮೋತ್ಸವಕ್ಕೆ ಬಳಸಿಕೊಳ್ಳಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ. ಇದರಿಂದ ಚಿತ್ರೋದ್ಯಮದ ಚಟುವಟಿಕೆಗಳನ್ನು ಅಲ್ಲಿಯೂ ನಡೆಸಬಹುದಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.