ADVERTISEMENT

2ಎಗೆ ಪ್ರಬಲ ಸಮುದಾಯಗಳ ಸೇರ್ಪಡೆಗೆ ವಿರೋಧ: ಹಿಂದುಳಿದ ಜಾತಿಗಳ ಒಕ್ಕೂಟದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 8:34 IST
Last Updated 17 ಮಾರ್ಚ್ 2021, 8:34 IST
ಹಿಂದುಳಿದ ಜಾತಿಗಳ ಒಕ್ಕೂಟದ ಪ್ರತಿಭಟನೆ
ಹಿಂದುಳಿದ ಜಾತಿಗಳ ಒಕ್ಕೂಟದ ಪ್ರತಿಭಟನೆ   

ಬೆಂಗಳೂರು: ಪ್ರವರ್ಗ 2ಎ ಅಡಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಪ್ರತಿಭಟನೆ ನಡೆಸುತ್ತಿದೆ.

‌ನಗರದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯದಯ ಮಾತನಾಡಿ, 'ಹಿಂದುಳಿದ ವರ್ಗಗಳ ಸುಮಾರು 16 ಅಭಿವೃದ್ಧಿ ನಿಗಮಗಳ ಪೈಕಿ ಬಹುತೇಕ ನಾನೇ ಮಾಡಿದ್ದೇನೆ. ಎರಡು ಹೊಸ ನಿಗಮಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರಿಗೆ ಎರಡು ನಿಗಮ ಮಾಡಿದರು‌. ಇದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಈ ಎರಡು ನಿಗಮಗಳಿಗೆ ತಲಾ ₹500 ಕೋಟಿ ಕೊಟ್ಟಿದ್ದಾರೆ. ಉಳಿದ 14 ನಿಗಮಗಳಿಗೆ ಕೇವಲ ₹500 ಕೋಟಿ ಕೊಟ್ಟಿದ್ದಾರೆ. ಇದು ಹಿಂದುಳಿದ ಜಾತಿಗಳಿಗೆ ಮಾಡಿದ ದ್ರೋಹ' ಎಂದರು.

'ಹಿಂದುಳಿದ ನಿಗಮಗಳ ಜನಸಂಖ್ಯೆ ಶೇ 70 ರಷ್ಟು ಇದೆ. ಕಡಿಮೆ ಅನುದಾನ ನೀಡಿದ್ದು ನ್ಯಾಯವಾ ಎಂದು ಕೇಳಿದರೆ ಯಡಿಯೂರಪ್ಪ ಉತ್ತರ ಕೊಡಲೇ ಇಲ್ಲ. ಯಡಿಯೂರಪ್ಪ ಹಿಂದುಳಿದ ಜಾತಿಗಳ ವಿರೋಧಿ' ಎಂದು ದೂರಿದರು.

ADVERTISEMENT

'ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ. ವಿದ್ಯಾಸಿರಿ ಯೋಜನೆಗೂ ಅನುದಾನ ಕೊಟ್ಟಿಲ್ಲ. ಜಾತಿ ಸಮೀಕ್ಷೆಯ ವರದಿಯನ್ನೂ ಬಿಡುಗಡೆ ಮಾಡುತ್ತಿಲ್ಲ. ಈ ವರದಿ ಬಿಡುಗಡೆಯಾದರೆ ಯಾವ ಜಾತಿಯವರ ವಸ್ತುಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತದೆ' ಎಂದರು.

'ಸಮಪಾಲು ಸಮಬಾಳು ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ' ಎಂದು ಟೀಕಿಸಿದರು.‌

ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, 'ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿರುವ ಸಮುದಾಯಗಳನ್ನು 2ಎಗೆ ಸೇರಿಸಬಾರದು. ಸೇರ್ಪಡೆಗೊಳಿಸಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ' ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.